ADVERTISEMENT

ಸಿದ್ದರಾಮಯ್ಯ ಸೋಲಿಸುವುದೇ ನನ್ನ ಗುರಿ: ಶ್ರೀನಿವಾಸಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 19:30 IST
Last Updated 8 ಅಕ್ಟೋಬರ್ 2017, 19:30 IST
ವಿ.ಶ್ರೀನಿವಾಸಪ್ರಸಾದ್‌
ವಿ.ಶ್ರೀನಿವಾಸಪ್ರಸಾದ್‌   

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ರಾಜಕೀಯ ಹಂತಕ. ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಮುಗಿಸಲು ಸುಪಾರಿ ಕೊಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುವುದೇ ನನ್ನ ಗುರಿ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್‌ ಇಲ್ಲಿ ಭಾನುವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನಂಜನಗೂಡು ಉಪಚುನಾವಣೆಯಲ್ಲಿ 44 ಸಾವಿರ ಮತ ಪಡೆಯಲು ₹ 44 ಕೋಟಿ ಖರ್ಚು ಮಾಡಿದ್ದಾರೆ. ಅದಕ್ಕೆ ಅವರ ಮನೆಯ ಕೆಲಸಗಾರ ಎಚ್‌.ಸಿ.ಮಹದೇವಪ್ಪ ಸಹಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಇಬ್ಬರೂ ಸೇರಿಕೊಂಡು ಜೆಡಿಎಸ್ ಸಹಾಯದಿಂದ ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದರು. ಈಗ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ನಾಟಕವಾಡುತ್ತಿದ್ದಾರೆ. ವರುಣಾ, ಚಾಮುಂಡೇಶ್ವರಿ ಎರಡು ಕಣ್ಣುಗಳು ಇದ್ದಂತೆ ಎನ್ನುತ್ತಿದ್ದಾರೆ. ಮೂರನೇ ಕಣ್ಣು ಎಲ್ಲಿ ಬಿಡುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನಾನು, ಶಾಸಕ ಜಿ.ಟಿ.ದೇವೇಗೌಡ ಹಾಗೂ ಎಚ್‌.ವಿಶ್ವನಾಥ್ ಒಂದೆಡೆ ಸೇರಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ. ಬಹಳ ಹಿಂದಿನಿಂದ ನಾವೆಲ್ಲಾ ಮಿತ್ರರು. ಸಿದ್ದರಾಮಯ್ಯ ಅವರಿಗೆ ಬುದ್ಧಿ ಕಲಿಸುವುದೇ ನಮ್ಮ ಗುರಿ‌. ಇದಕ್ಕಾಗಿ ನಾನು ಚುನಾವಣಾ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಪುಸ್ತಕ ಬರೆಯುತ್ತಿದ್ದು, ಸದ್ಯದಲ್ಲೇ ಎಲ್ಲ ವಿಚಾರಗಳನ್ನು ಬಯಲು ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.