ADVERTISEMENT

ಸೇತುವೆ ಕಾಮಗಾರಿ ಅಡಚಣೆ-ರೈಲು ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ತುಮಕೂರು: ತುಮಕೂರು- ಗುಬ್ಬಿ ನಡುವಿನ ರೈಲ್ವೆ ಸೇತುವೆ ಬಳಿ ಕಾಮಗಾರಿ ನಡೆಸುವಾಗ ಹಳಿಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಶುಕ್ರವಾರ ಸಂಜೆಯಿಂದ ಈ ಭಾಗದ ರೈಲು ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
 
ಇದರಿಂದಾಗಿ ಬೆಂಗಳೂರು- ಹುಬ್ಬಳ್ಳಿ ನಡುವೆ ಸಂಚರಿಸುವ ಹತ್ತಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇವುಗಳಲ್ಲಿ ಕೆಲ ರೈಲುಗಳು ಹೊರ ರಾಜ್ಯಕ್ಕೂ ಸಂಚರಿಸುತ್ತವೆ. ಈಗಾಗಲೇ ಈ ರೈಲುಗಳು ನಿಲ್ದಾಣದಿಂದ ಹೊರಟಿದ್ದು, ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ಸಿಬ್ಬಂದಿ ಹಳಿ ದುರಸ್ತಿ ಕೆಲಸದಲ್ಲಿ ತೊಡಗಿದ್ದಾಗ ಹಳಿಗಳ ಅಳತೆಯ್ಲ್ಲಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸ ಕಂಡುಬಂದ ಕಾರಣ ಕೂಡಲೇ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನು ಬಂದ್ ಮಾಡಲಾಯಿತು. ಕೆಲವೇ ಗಂಟೆಗಳಲ್ಲಿ ಕೆಲಸ ಮುಗಿಯಲಿದೆ ಎಂದು  ಸಿಬ್ಬಂದಿ ಹೇಳಿದರಾದರೂ ತಡರಾತ್ರಿಯಾದರೂ ಸರಿಪಡಿಸಲು ಸಾಧ್ಯವಾಗಲಿಲ್ಲ.

ತುಮಕೂರು ರೈಲು ನಿಲ್ದಾಣದಲ್ಲಿ ಸಂಜೆ 5.45ರಿಂದ ಶಿವಮೊಗ್ಗ ಇಂಟರ್‌ಸಿಟಿ ರೈಲು, ಶಿವಮೊಗ್ಗ ಪ್ಯಾಸೆಂಜರ್ ರೈಲಿಗೆ ನಿಲುಗಡೆ ನೀಡಲಾಗಿದೆ. ಅರಸೀಕೆರೆಗೆ ತೆರಳಬೇಕಾದ `ಪುಷ್‌ಪುಲ್~ ರೈಲು ಕ್ಯಾತ್ಸಂದ್ರ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡಿದೆ. ಗೋಲಗುಂಬಜ್ (ಕುರ್‌ಕುರೇ) ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿಡುವಂದ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ ಎನ್ನಲಾಗಿದೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ರೈಲುಗಳನ್ನು ಸಂಪಿಗೆ ರೋಡ್, ಅಮ್ಮಸಂದ್ರ, ಬಾಣಸಂದ್ರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗಿದೆ. ಘಟನೆಯಿಂದ ಹತ್ತಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ರೈಲುಗಳ ಸಂಚಾರ ಸ್ಥಗಿತಗೊಂಡಿರುವುದಕ್ಕೆ ಪ್ರಯಾಣಿಕರು ತುಮಕೂರು ರೈಲ್ವೆ ನಿಲ್ದಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಪ್ರಯಾಣಿಕರಿಗೆ ಟಿಕೆಟ್ ದರವನ್ನು ವಾಪಸ್ ನೀಡುವುದಾಗಿ ಪ್ರಕಟಿಸಿದ ಮೇಲೆ ಪರಿಸ್ಥಿತಿ ತಿಳಿಯಾಯಿತಾದರೂ ಅಸಮಾಧಾನ ತಗ್ಗಲಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಸಿಬ್ಬಂದಿ ರೈಲು ನಿಲ್ದಾಣಕ್ಕೆ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿದರು ಎಂದು ಸ್ಥಳದಲ್ಲಿದ್ದ ಪ್ರಯಾಣಿಕರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬಹುತೇಕ ಪ್ರಯಾಣಿಕರು ಹಣ ವಾಪಸ್ ಪಡೆದು ಬಸ್‌ಗಳಲ್ಲಿ ಪ್ರಯಾಣ ಮುಂದುವರಿಸಿದರು. ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು ಘಟನೆಯಿಂದ ವಿಚಲಿತರಾದರು. ಹುಬ್ಬಳ್ಳಿಯಿಂದ ಬೆಂಗಳೂರು ತಲುಪಬೇಕಿದ್ದ ದಾದರ್, ಶತಾಬ್ಧಿ, ಶಿವಮೊಗ್ಗ ಪ್ಯಾಸೆಂಜರ್ ರೈಲುಗಳು ಮಾರ್ಗ ಮಧ್ಯದಲ್ಲಿ ನಿಲುಗಡೆ ಮಾಡಿವೆ. ಸಂಪಿಗೆ ರೋಡ್‌ನಲ್ಲಿ ಸಹ ನಿಲುಗಡೆ ನೀಡಲಾಗಿದೆ.

 ಈ ನಿಲ್ದಾಣದ ಸಮೀಪ ಯಾವುದೇ ಬಸ್ ನಿಲ್ದಾಣ ಇಲ್ಲ. ಜತೆಗೆ ಯಾವ ಊರು ಸಹ ಸಮೀಪದಲ್ಲಿ ಇರದಿದ್ದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆಗೆ ಸಿಲುಕಿಕೊಂಡಿದ್ದಾರೆ. ನಿಲ್ದಾಣದಿಂದ ಐದು ಕಿ.ಮೀ ದೂರ ಇರುವ ದೊಡ್ಡಗುಣಿ ಗ್ರಾಮಕ್ಕೆ ಬಂದರೂ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಯಾವುದೇ ಬಸ್‌ಗಳು ನಿಲುಗಡೆ ಮಾಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಎತ್ತಲೂ ಹೋಗಲು ಸಾಧ್ಯವಾಗದೆ ತಡರಾತ್ರಿಯಲ್ಲೂ ರಸ್ತೆಯಲ್ಲಿ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.