ADVERTISEMENT

ಸೌರಶಕ್ತಿ ಪಂಪ್‌ಸೆಟ್ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2013, 19:59 IST
Last Updated 17 ಫೆಬ್ರುವರಿ 2013, 19:59 IST
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಸತಿಗೃಹದ ಆವರಣದಲ್ಲಿನ ಬಾವಿಯಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ  ಸೌರಶಕ್ತಿ ಮೂಲಕ ವಿದ್ಯುತ್ ಪೂರೈಕೆ ಮಾಡಿ, ನೀರು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಭಾನುವಾರ ಕೃಷಿ ಸಚಿವ ಉಮೇಶ್ ಕತ್ತಿ ವೀಕ್ಷಿಸಿದರು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಸತಿಗೃಹದ ಆವರಣದಲ್ಲಿನ ಬಾವಿಯಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ ಸೌರಶಕ್ತಿ ಮೂಲಕ ವಿದ್ಯುತ್ ಪೂರೈಕೆ ಮಾಡಿ, ನೀರು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಭಾನುವಾರ ಕೃಷಿ ಸಚಿವ ಉಮೇಶ್ ಕತ್ತಿ ವೀಕ್ಷಿಸಿದರು.   

ಹುಕ್ಕೇರಿ: `ವಿದ್ಯುತ್ ಅಭಾವದಿಂದ ರೈತರು ಕಂಗಾಲಾಗಿದ್ದು, ಮಳೆಯನ್ನೇ ಅವಲಂಬಿಸಿ ವಿದ್ಯುತ್ ಉತ್ಪಾದಿಸುವುದು ಕಷ್ಟಕರ ಎಂದು ಪರಿಗಣಿಸಿ, ಸರ್ಕಾರ ಸೌರ ವಿದ್ಯುತ್ ಉತ್ಪಾದನೆಗೆ ರೂ.50 ಕೋಟಿ ತೆಗೆದಿರಿಸಿದೆ' ಎಂದು ಕೃಷಿ ಸಚಿವ ಉಮೇಶ್ ಕತ್ತಿ ಹೇಳಿದರು.

ಭಾನುವಾರ ಸ್ಥಳೀಯ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಸತಿಗೃಹದ ಆವರಣದಲ್ಲಿನ ಬಾವಿಯಲ್ಲಿ ನೀರಾವರಿ ಪಂಪ್ ಸೆಟ್‌ಗಳಿಗೆ  ಸೌರಶಕ್ತಿ ಮೂಲಕ ನೀರು ಪೂರೈಸುವ ಪ್ರಾತ್ಯಕ್ಷಿಕೆ ನೋಡಿದ ನಂತರ ಮಾತನಾಡಿದರು.

`ರಾಜ್ಯದ ಏಕೈಕ ಸಹಕಾರಿ ವಿದ್ಯುತ್ ಸಂಘದಡಿ ಈ ಪ್ರಾಯೋಗಿಕ ಕಾರ್ಯ ಕೈಗೊಳ್ಳಲಾಗಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕೊರತೆ ನೀಗಿಸಲು ರೈತ ಸಮೂಹಕ್ಕೆ ರಾಜ್ಯ ಸರ್ಕಾರ ವಿನೂತನ ಯೋಜನೆ ಪರಿಚಯಿಸುತ್ತಿದೆ. ನಮ್ಮ ಇಲಾಖೆಯ ಅಧಿಕಾರಿಗಳು ನೆರೆಯ ಆಂಧ್ರದಲ್ಲಿ ಅಧ್ಯಯನ ಮಾಡಿ, ಅಲ್ಲಿ ಯೋಜನೆ ಯಶಸ್ಸು ಕಂಡ್ದ್ದಿದು ಇಲ್ಲಿಯೂ ಹಂತ ಹಂತವಾಗಿ ಅಳವಡಿಸಲು ನಿರ್ಧರಿಸಲಾಗಿದೆ' ಎಂದರು.

`ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ 90ರಷ್ಟು ಸಬ್ಸಿಡಿ, ಒಂದು ಹೆಕ್ಟೇರ್‌ಗಿಂತ ಕಡಿಮೆ ಜಮೀನು ಇದ್ದ ರೈತರಿಗೆ ಶೇ 80, 1ರಿಂದ 2 ಹೆಕ್ಟೇರ್ ಇದ್ದವರಿಗೆ ಶೇ 70 ಮತ್ತು ಇತರ ರೈತರಿಗೆ ಶೇ. 60ರಷ್ಟು ಸಬ್ಸಿಡಿ ನೀಡಲಾಗುವುದು. ಇದಕ್ಕೆ ಕೇಂದ್ರದಿಂದ ಶೇ 30ರಷ್ಟು ಸಬ್ಸಿಡಿ ಸಿಗಲಿದೆ' ಎಂದರು.

ನಾಲ್ಕು ಕಡೆ:  ರಾಜ್ಯದ ಪ್ರತಿ ವಿಭಾಗದಲ್ಲಿ ಒಂದು ಜಿಲ್ಲೆ ಆಯ್ಕೆ ಮಾಡಿ, ರೈತರಿಗೆ ಸೌರಶಕ್ತಿಯ ಪರಿಚಯ ಮಾಡಲಾಗುವುದು. ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ರೂ.5 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಈ ವೆಚ್ಚ ತಗ್ಗಿಸಲು ಮತ್ತು ರೈತರಿಗೆ ಸ್ವಾಯತ್ತತೆ ಒದಗಿಸಲು ಸೌರಶಕ್ತಿ ಯೋಜನೆ ಹಮ್ಮಿಕೊಂಡಿದೆ ಎಂದು ಸಚಿವ ಕತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.