ADVERTISEMENT

‘ಸ್ವಾಮೀಜಿಗಳ ಪ್ರವೇಶ ನಿರ್ಬಂಧಿಸಿ’ : ಸಚಿವ ಎಂ.ಬಿ.ಪಾಟೀಲ

ಚುನಾವಣಾ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ‘ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಹಾಗೂ ಮನಗೂಳಿ ಸ್ವಾಮೀಜಿ– ಇವರಿಬ್ಬರೂ ಬಿಜೆಪಿ ವಕ್ತಾರರಾಗಿದ್ದಾರೆ. ಹೀಗಾಗಿ ಅವರಿಗೆ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು. ಇಲ್ಲದಿದ್ದರೆ, ಬಸವ ಸೇನೆ ಹಾಗೂ ಲಿಂಗಾಯತ ಮಠದ ಸ್ವಾಮೀಜಿಗಳೂ ನಮ್ಮ ಪರ ಅಖಾಡಕ್ಕೆ ಇಳಿಯಲಿದ್ದಾರೆ’ ಎಂದು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯೂ ಆದ ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.

‘ಈ ಸ್ವಾಮೀಜಿಗಳ ಜತೆ ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಸೇರಿ ಪಂಚ ಪೀಠದ ಸ್ವಾಮೀಜಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಚುನಾವಣೆ ಮುಗಿಯುವ ತನಕ ಈ ಸ್ವಾಮೀಜಿಗಳನ್ನು ಕ್ಷೇತ್ರ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಅವರು ಮಾಡುತ್ತಿ ರುವ ಅಕ್ರಮಗಳ ಬಗ್ಗೆ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಧರ್ಮದ ಹೆಸರಿನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಮ್ಮಲ್ಲೂ ರಾಷ್ಟ್ರೀಯ ಬಸವ ಸೇನೆ, ಬಸವ ದಳ, ಜಾಗತಿಕ ಲಿಂಗಾ ಯತ ಮಹಾಸಭಾ ಇದೆ. ಜತೆಗೆ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆ. ಕೂಡಲ‌ಸಂಗಮದ ಪಂಚಮಸಾಲಿ, ಅಂಬಿಗರ ಚೌಡಯ್ಯ, ತೋಂಟದಾರ್ಯ ಸ್ವಾಮೀಜಿ, ನಾಗನೂರ, ಭಾಲ್ಕಿ ಸ್ವಾಮೀಜಿಗಳ ದಂಡೇ ಇದೆ. ಪಂಚಪೀಠಾಧೀಶ್ವರರಿಗೆ ಚುನಾವಣಾ ಆಯೋಗ ಕಡಿವಾಣ ಹಾಕದಿದ್ದರೇ ಅನಿವಾರ್ಯವಾಗಿ ಬಬಲೇಶ್ವರ ಕ್ಷೇತ್ರದಲ್ಲಿ ‘ಬಸವ ರಥ’ ಚಲಿಸಲಿದೆ. ಮುಂದಾಗುವ ಅನಾಹುತಗಳಿಗೆ ನಾವು ಹೊಣೆಗಾರರಲ್ಲ. ಪಂಚಪೀಠಾಧೀಶ್ವರರು, ಚುನಾವಣಾ ಆಯೋಗವೇ ಇದರ ಹೊಣೆ ಹೊರಬೇಕಾಗುತ್ತದೆ’ ಎಂದು ಪಾಟೀಲ ಎಚ್ಚರಿಸಿದರು.

‘ಆರ್‌ಎಸ್‌ಎಸ್‌, ವಿಎಚ್‌ಪಿ, ವೀರಶೈವ ಮಹಾಸಭಾದ ಮಹಿಳಾ ತಂಡ ಬಬಲೇಶ್ವರ ಕ್ಷೇತ್ರ ಪ್ರವೇಶಿಸಿವೆ. ವಿಭೂತಿ, ರುದ್ರಾಕ್ಷಿ ಮುಟ್ಟಿಸಿ ಎಂ.ಬಿ.ಪಾಟೀಲರಿಗೆ ಮತ ಹಾಕಬೇಡಿ ಎಂದು ಆಣೆ, ಪ್ರಮಾಣ ಮಾಡಿಸಿಕೊಳ್ಳುವ ಷಡ್ಯಂತ್ರ ರೂಪಿಸಿವೆ. ಇದಕ್ಕೆ ಪಂಚಪೀಠಾಧೀಶ್ವರರು ಸಮ್ಮತಿಯ ಮುದ್ರೆಯೊತ್ತಿ ಕಳುಹಿಸಿದ್ದಾರೆ. ಆಣೆ, ಪ್ರಮಾಣ ಮಾಡಿಸಿಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆ. ಇದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಅವಕಾಶ ನೀಡಲ್ಲ’ ಎಂದು ಅವರು ಗುಡುಗಿದರು.

‘ಅನುಕಂಪ ಗಿಟ್ಟಿಸಿಕೊಳ್ಳಲು ಪಂಚಪೀಠದ ಸ್ವಾಮೀಜಿಗಳು ಮಾಧ್ಯ ಮದ ಮುಂದೆ ಸುಳ್ಳು ಹೇಳುತ್ತಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿ ತಮ್ಮ ಸಮ್ಮುಖವೇ ಆಣೆ ಮಾಡಿಸಿಕೊಳ್ಳುತ್ತಿರುವ ಆಡಿಯೊ ನನ್ನ ಬಳಿ ಇದ್ದು, ಆಯೋಗಕ್ಕೆ ದೂರು ಸಲ್ಲಿಸಿರುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ವಾಮೀಜಿಗಳು ನೀತಿ ಸಂಹಿತೆ ಉಲ್ಲಂಘಿಸಿರುವ ಸಂಬಂಧ ಹಲವು ದೂರುಗಳನ್ನು ಆಯೋಗದ ಅಧಿಕಾರಿ ಗಳಿಗೆ ಸಲ್ಲಿಸಲಾಗಿದೆ. ಯಾವುದೇ ಕ್ರಮ ತೆಗೆದುಕೊಳ್ಳದೇ ಸ್ಥಳೀಯ ಅಧಿಕಾರಿ ಗಳು ನಿಷ್ಕ್ರಿಯರಾಗಿದ್ದಾರೆ’ ಎಂದು ದೂರಿದರು.
** 
‘ಚುನಾವಣೆ ಮುಗಿಯುವರೆಗೆ ತಟಸ್ಥವಾಗಿರಿ’ 
ದಾವಣಗೆರೆ: ಚುನಾವಣೆ ಮುಗಿಯುವವರೆಗೆ ವೀರಶೈವ ಮಹಾಸಭಾದ ಪದಾಧಿಕಾರಿಗಳು ತಟಸ್ಥವಾಗಿರಬೇಕು. ಯಾವುದೇ ಧರ್ಮ ಜಾಗೃತಿ ಜಾಥಾ ಕೈಗೊಳ್ಳಬಾರದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಾಕೀತು ಮಾಡಿದರು.

ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ಗುರುವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೀರಶೈವ ಅಥವಾ ಲಿಂಗಾಯತ ಎರಡೂ ವಿಚಾರ ಈಗ ಬೇಡ ಎಂದ ಅವರು, ಮಹಾಸಭಾದ ಯುವ ಹಾಗೂ ಮಹಿಳಾ ಘಟಕಗಳಿಗೆ ಸೂಚನೆ ನೀಡಿದರು.

‘ಪ್ರತ್ಯೇಕ ಧರ್ಮದ ವಿಚಾರ ಚುನಾವಣೆಯಲ್ಲಿ ಪ್ರಭಾವ ಬೀರಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಲ್ಯಾಣಕ್ಕೆ ಮಾಡಿದ ಕೆಲಸಗಳು ಹೆಚ್ಚು ಚರ್ಚೆಗೆ ಬರುತ್ತಿವೆ’ ಎಂದು ಹೇಳಿದರು.

ಇದೇ 30ರಿಂದ ವೀರಶೈವ, ಲಿಂಗಾಯತ ಎರಡೂ ಒಂದೇ ಎಂದು ಸಂದೇಶ ಸಾರಲು ವೀರಶೈವ ಮಹಾಸಭಾದ ಐದು ತಂಡಗಳು ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.