ADVERTISEMENT

ಹಂತಕರು ಹಾರಿಸಿದ್ದು 14 ಗುಂಡುಗಳು!

ಗೌರಿ ಲಂಕೇಶ್‌ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 19:42 IST
Last Updated 6 ಸೆಪ್ಟೆಂಬರ್ 2017, 19:42 IST
ಹಂತಕರು ಹಾರಿಸಿದ್ದು 14 ಗುಂಡುಗಳು!
ಹಂತಕರು ಹಾರಿಸಿದ್ದು 14 ಗುಂಡುಗಳು!   

ಬೆಂಗಳೂರು: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿಲಂಕೇಶ್ (55) ಅವರತ್ತ ದುಷ್ಕರ್ಮಿಗಳು 14 ಸುತ್ತು ಗುಂಡು ಹಾರಿಸಿರುವುದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದೆ.

ಬುಧವಾರ ರಾತ್ರಿ 12.45ರ ಸುಮಾರಿಗೆ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. 7.65 ಪಿಸ್ತೂಲಿನಿಂದ ಹಾರಿಸಿರುವ 14 ಗುಂಡುಗಳಲ್ಲಿ, ಮೂರು ಗೌರಿ ಅವರ ದೇಹವನ್ನು ಹೊಕ್ಕರೆ, ಇನ್ನುಳಿದವು ಮನೆಯ ಗೋಡೆ, ಹೂವಿನ ಕುಂಡ ಹಾಗೂ ಕಾಂಪೌಂಡ್‌ಗೆ ಬಿದ್ದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

30 ಸೆಕೆಂಡ್‌ ದೃಶ್ಯ: ಗೌರಿ ಹತ್ಯೆಯ ದೃಶ್ಯಗಳು ಅವರ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ADVERTISEMENT

‘ಜರ್ಕಿನ್, ಬ್ಯಾಗ್ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿದ್ದ ಸುಮಾರು 5.3 ಅಡಿ ಎತ್ತರದ 28 ವರ್ಷದ ಯುವಕನೊಬ್ಬ, ಗೇಟ್ ಮೂಲಕ ಮನೆಯೊಳಗೆ ಬಂದಿರುವ ಹಾಗೂ ಗುಂಡಿನ ದಾಳಿ ನಡೆಸಿರುವ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿವೆ. ಆದರೆ, ಅದರ ಗುಣಮಟ್ಟ ಸರಿಯಿಲ್ಲ. ಹೀಗಾಗಿ, ತಂತ್ರಜ್ಞರ ನೆರವಿನಿಂದ ಆ ದೃಶ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹೀಗಿದೆ ದೃಶ್ಯ: ರಾತ್ರಿ 7.45ಕ್ಕೆ ಮನೆ ಹತ್ತಿರ ಬರುವ ಗೌರಿ, ಹೊರಗೆ ಕಾರು ನಿಲ್ಲಿಸಿ ಕೆಳಗಿಳಿಯುತ್ತಾರೆ. ಆ ನಂತರ ಗೇಟ್ ತೆಗೆದು ಒಳಗೆ ಹೋಗಿ, ಮನೆ ಬೀಗ ತೆಗೆಯಲು ಮುಂದಾಗುತ್ತಾರೆ.

ಇದೇ ಸಮಯದಲ್ಲಿ ಆಗಂತುಕನೊಬ್ಬ ಗೇಟ್ ಬಳಿ ಬಂದು ನಿಲ್ಲುತ್ತಾನೆ. ಅಪರಿಚಿತನನ್ನು ಕಂಡ ಕೂಡಲೇ ಗೌರಿ ಅವರು ಬೀಗ ತೆಗೆಯುವುದನ್ನು ಬಿಟ್ಟು ವಿಚಾರಿಸಲು ವಾಪಸ್ ಬರುತ್ತಾರೆ. ಈ ವೇಳೆ ಅವನು ಬ್ಯಾಗ್‌ನಿಂದ ಪಿಸ್ತೂಲ್ ತೆಗೆಯುತ್ತಾನೆ. ಇದರಿಂದ ಹೆದರಿ ತಕ್ಷಣ ಅವರು ಮನೆ ಬಾಗಿಲಿನತ್ತ ಓಡುತ್ತಾರೆ.

ಈ ಹಂತದಲ್ಲಿ ಹಂತಕ ಗೇಟ್ ಹತ್ತಿರ ನಿಂತುಕೊಂಡೇ ಮನಸೋಇಚ್ಛೆ ಗುಂಡಿನ ಮಳೆಗರೆಯುತ್ತಾನೆ. ಮೊದಲು ಹಾರಿಸಿದ ಗುಂಡುಗಳು ಮನೆ ಗೋಡೆ ಹಾಗೂ ಕಾಂಪೌಂಡ್‌ಗೆ ಬೀಳುತ್ತವೆ. ತಕ್ಷಣ ಅವರ ಹತ್ತಿರ ಓಡುವ ಆತ, ಎರಡು ಮೀಟರ್ ಅಂತರದಲ್ಲಿ ನಿಂತು ಎದೆಗೆ ಎರಡು ಗುಂಡುಗಳನ್ನು ಹೊಡೆಯುತ್ತಾನೆ.

ಇದರಿಂದ ಅವರು ಕುಸಿದು ಬೀಳುತ್ತಾರೆ. ಆಗ ವಾಪಸ್ ಹೊರಡುವ ಆತ, ಅವರತ್ತ ತಿರುಗಿ ಮತ್ತೊಂದು ಗುಂಡು ಹೊಡೆಯುತ್ತಾನೆ. ಅದು ಕಿಬ್ಬೊಟ್ಟೆಯನ್ನು ಹೊಕ್ಕುತ್ತದೆ.  ನಂತರ ಗೇಟ್ ಮೂಲಕವೇ ಹೊರಗೆ ಓಡುತ್ತಾನೆ. ಹೀಗೆ, ಕೇವಲ 30 ಸೆಕೆಂಡ್‌ಗಳಲ್ಲಿ ಅವರ ಹತ್ಯೆ ನಡೆದು ಹೋಗುತ್ತದೆ.

ಇವಿಷ್ಟು ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ಹೊರಗೆ ಬಂದ ನಂತರ ಆತ ಹೇಗೆ ಪರಾರಿಯಾದ ಎಂಬುದು ಗೊತ್ತಾಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಸಹಚರನೊಬ್ಬನ ಜತೆ ಬಿಳಿ ಬಣ್ಣದ ‘ಆ್ಯಕ್ಟಿವ್ ಹೊಂಡಾ’ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಒಬ್ಬನೇ ಎರಡು ಮ್ಯಾಗಜಿನ್‌ ಬಳಸಿ ಒಂದೇ ಪಿಸ್ತೂಲ್‌ನಿಂದ ಗುಂಡುಗಳನ್ನು ಹೊಡೆದಿರಬಹುದು ಅಥವಾ ಗೇಟ್‌ನ ಹೊರಭಾಗದಲ್ಲಿ ನಿಂತ ಇನ್ನೊಬ್ಬನೂ ಗುಂಡಿನ ದಾಳಿ ನಡೆಸಿರಬಹುದು’ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೊಟ್ಟೆಯಲ್ಲಿದ್ದ ಗುಂಡು ನಾಪತ್ತೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬುಧವಾರ ನಾಲ್ಕು ತಾಸು ಮರಣೋತ್ತರ ಪರೀಕ್ಷೆ ನಡೆಸಿ ಎಲ್ಲ ಗುಂಡುಗಳನ್ನೂ ದೇಹದಿಂದ ಹೊರತೆಗೆಯಲಾಯಿತು.

ಬೆಳಿಗ್ಗೆ 8.45ಕ್ಕೇ ಶವಪರೀಕ್ಷೆ ಆರಂಭವಾಯಿತು. ಎದೆಗೆ ಹೊಕ್ಕಿದ್ದ ಎರಡು ಗುಂಡುಗಳನ್ನು ವೈದ್ಯರು ಬೇಗನೆ ತೆಗೆದರು. ಆದರೆ, ಕಿಬ್ಬೊಟ್ಟೆಗೆ ಬಿದ್ದಿದ್ದ ಗುಂಡು ತಕ್ಷಣಕ್ಕೆ ಸಿಗಲಿಲ್ಲ.

ಗುಂಡು ದೇಹ ಸೀಳಿಕೊಂಡು ಆಚೆ ಹೋಗಿಲ್ಲ. ಅದು ಹೊಟ್ಟೆಯಲ್ಲೇ ಉಳಿದಿದೆ ಎಂಬುದನ್ನು ಖಚಿತಪಡಿಸಿಕೊಂಡ ವೈದ್ಯರು, ಪುನಃ ದೇಹದ ಎಕ್ಸ್‌ರೇ ತೆಗೆದರು. ಆಗ ಮೂಳೆ ಮರೆಯಲ್ಲಿ ಗುಂಡು ಸಿಕ್ಕಿ ಹಾಕಿಕೊಂಡಿರುವುದು ಗೊತ್ತಾಯಿತು. ನಂತರ ಅದನ್ನೂ ಹೊರತೆಗೆದರು.

ಈ ಪ್ರಕ್ರಿಯೆಯಿಂದಾಗಿ ಮರಣೋತ್ತರ ಪರೀಕ್ಷೆ ವಿಳಂಬವಾಯಿತು. ಮಧ್ಯಾಹ್ನ 12.45ರ ಸುಮಾರಿಗೆ ಪೊಲೀಸರು ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರ ಮಾಡಿದರು. ಆ ನಂತರ ಶವವನ್ನು ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರಕ್ಕೆ ತೆಗೆದುಕೊಂಡು ಹೋಗಲಾಯಿತು.

ತಾಯಿಗೆ ಕೊನೆ ಕರೆ: ‘ಗೌರಿ ಅವರ ಮೊಬೈಲ್‌ಗೆ ಬಂದು ಹೋಗಿರುವ ಕರೆಗಳನ್ನು ಪರಿಶೀಲಿಸಿದ್ದೇವೆ. ಹತ್ಯೆಯಾಗುವುದಕ್ಕೂ ಎರಡು ನಿಮಿಷಗಳ ಮುನ್ನವಷ್ಟೇ ಅವರು ತಾಯಿಗೆ ಕರೆ ಮಾಡಿ ಮಾತನಾಡಿದ್ದಾರೆ. ಅದಕ್ಕಿಂತ ಮೊದಲು ಕಚೇರಿ ನೌಕರ ಸತೀಶ್‌ಗೆ ಕರೆ ಮಾಡಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಹಂತಕರ ಪತ್ತೆಗೆ ವಿಶೇಷ ತಂಡಗಳ ಜತೆಗೆ ಸಿಐಡಿಯ ಸೈಬರ್ ಪೊಲೀಸರು ಸಹ ಕೈಜೋಡಿಸಿದ್ದಾರೆ. ಗೌರಿ ಅವರ ಫೇಸ್‌ಬುಕ್ ಹಾಗೂ ಟ್ವೀಟ್‌ಗಳನ್ನು ಪರಿಶೀಲಿಸುತ್ತಿರುವ ಅವರು, ‘ಟವರ್‌ ಡಂಪ್’ ತನಿಖೆಯನ್ನೂ ಪ್ರಾರಂಭಿಸಿದ್ದಾರೆ. ನಾಲ್ಕೈದು ದಿನಗಳಲ್ಲಿ ಗೌರಿ ಲಂಕೇಶ್ ಅವರ ಮನೆ ಸಮೀಪದ ಟವರ್‌ಗಳಿಂದ ಸಂಪರ್ಕ ಪಡೆದಿರುವ ಎಲ್ಲ ಮೊಬೈಲ್‌ ಸಂಖ್ಯೆಗಳನ್ನೂ ಪರಿಶೀಲಿಸುತ್ತಿದ್ದಾರೆ.

‘ಬಸವನಗುಡಿಯಲ್ಲಿರುವ ತಮ್ಮ ಕಚೇರಿಯಿಂದ ರಾತ್ರಿ 7 ಗಂಟೆಗೆ ಹೊರಟಿದ್ದ ಅವರು, 7.45ರ ಸುಮಾರಿಗೆ ಮನೆ ಹತ್ತಿರ ಹೋಗಿದ್ದರು. ಈ ಮಾರ್ಗದ 36 ಸಿ.ಸಿ ಟಿ.ವಿ ಕ್ಯಾಮೆರಾಗಳು ಹಾಗೂ ಡಿವಿಆರ್ ಪೆಟ್ಟಿಗೆಗಳನ್ನು ವಶಕ್ಕೆ ಪಡೆದಿದ್ದೇವೆ. ಅವರ ಕಾರಿನ ಹಿಂದೆ ಸಾಗಿರುವ ಎಲ್ಲ ಬೈಕ್ ಹಾಗೂ ಸ್ಕೂಟರ್‌ಗಳ ನೋಂದಣಿ ಸಂಖ್ಯೆ ಪರಿಶೀಲಿಸಿ, ಅವುಗಳ ಮಾಲೀಕರನ್ನು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಿಬಿಐಗೆ ವಹಿಸಿ: ‘ಸೋದರಿಯ ಹತ್ಯೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಭೇದಿಸುತ್ತಾರೆ ಎಂಬ ವಿಶ್ವಾಸ ನನಗಿಲ್ಲ. ಕಲಬುರ್ಗಿ ಅವರ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಿದಂತೆಯೇ, ಇದನ್ನೂ ಮುಚ್ಚಿ ಹಾಕುವ ಸಾಧ್ಯತೆ ಇದೆ. ಹೀಗಾಗಿ, ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಗೌರಿ ಅವರ ತಮ್ಮ ಇಂದ್ರಜಿತ್ ಲಂಕೇಶ್ ಆಗ್ರಹಿಸಿದರು.
*
7.65 ಎಂಎಂ ಪಿಸ್ತೂಲ್
‘ಗುಂಡಿನ ಚೂರುಗಳನ್ನು ಎಫ್‌ಎಸ್ಎಲ್‌ಗೆ ಕಳುಹಿಸಲಾಗಿದೆ. ಕೃತ್ಯಕ್ಕೆ 7.65 ಎಂ.ಎಂ ಪಿಸ್ತೂಲ್‌ ಬಳಕೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಪಿಸ್ತೂಲ್‌ ಮ್ಯಾಗಜಿನ್‌ನಲ್ಲಿ 6 ರಿಂದ 10 ಗುಂಡುಗಳು ಹಾಕಬಹುದು. ಸಂಶೋಧಕ ಎಂ.ಎಂ.ಕಲಬುರ್ಗಿ, ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆಗೆ ಬಳಕೆಯಾಗಿದ್ದೂ ಇದೇ ಮಾದರಿಯ ಪಿಸ್ತೂಲ್’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.
*
ನೇತ್ರದಾನ ಮಾಡಿದ ಗೌರಿ

‘ನನ್ನ ಅಕ್ಕ ನಿರ್ಭೀತ ಹಾಗೂ ದಿಟ್ಟ ಪತ್ರಕರ್ತೆಯಾಗಿದ್ದಳು. ಜೀವಕ್ಕೆ ಬೆದರಿಕೆಯಿರುವ ಬಗ್ಗೆ ಯಾವತ್ತೂ ಹೇಳಿಕೊಂಡಿರಲಿಲ್ಲ. ತನ್ನ ಕಣ್ಣುಗಳನ್ನು ದಾನ ಮಾಡಬೇಕೆಂಬ ಇಚ್ಛೆ ಹೊಂದಿದ್ದಳು. ಅಂತೆಯೇ ಮಿಂಟೊ ಆಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡಿದ್ದೇವೆ’ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.