ADVERTISEMENT

ಹತ್ತು ಪೈಸೆಗೆ ಒಂದು ಲೀಟರ್ ನೀರು!

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

ಗದಗ: ಕೆರೆ-ಕಟ್ಟೆಗಳು ಒಣಗಿವೆ, ಹಲವು ಹಳ್ಳಿಗಳಿಗೆ ಸಂಪರ್ಕ ರಸ್ತೆಗಳೇ ಇಲ್ಲ. ಸರಿಯಾದ ಶೌಚಾಲಯಗಳಿಲ್ಲ, ಬಸ್ ಸೌಲಭ್ಯವೂ ಇಲ್ಲ, ಶುದ್ಧ ನೀರಂತೂ ಇಲ್ಲವೇ ಇಲ್ಲ...

ಇದು ಜಿಲ್ಲೆಯ ಬಹುತೇಕ ಗ್ರಾಮಗಳ ದುಃಸ್ಥಿತಿ. ಕುಡಿಯುವ ನೀರಿಗಾಗಿ ಕೆರೆ ಅವಲಂಬಿಸಿರುವ ಗ್ರಾಮಗಳು ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿವೆ.
 
ಹೀಗಾಗಿ ನೀರಿನಲ್ಲಿ ಸಮಾನತೆ ತರುವ ಉದ್ದೇಶದಿಂದ ಅತಿ ಗಣ್ಯರು ಕುಡಿಯುವ ಗುಣಮಟ್ಟದ ನೀರನ್ನೇ ಗ್ರಾಮೀಣ ಪ್ರದೇಶದ ಜನರಿಗೂ ಒದಗಿಸಬೇಕು ಎಂಬ ಉದ್ದೇಶದಿಂದ ಗದುಗಿನ ಕೆ.ಎಚ್. ಪಾಟೀಲ ಪ್ರತಿಷ್ಠಾನ ಮತ್ತು ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ನೀರಿನ ಸಮಸ್ಯೆ ಎದುರಿಸುತ್ತಿರುವ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನಾಂದೋಲನದ ಮೂಲಕ  ಜಾಗೃತಿ ಮೂಡಿಸಲು ಮುಂದಾಗಿದೆ.

ಗದಗ ಜಿಲ್ಲೆಯಲ್ಲಿ ಒಂದೂವರೆ ವರ್ಷದಿಂದ 35 ಶುದ್ಧ ನೀರು ಘಟಕಗಳನ್ನು ಆರಂಭಿಸಿ ಯಶಸ್ವಿಯಾಗಿರುವ ಪ್ರತಿಷ್ಠಾನ, ಕುಡಿಯುವ ನೀರಿಗಾಗಿ ಕೆರೆ ಅವಲಂಬಿತ ಉತ್ತರ ಕರ್ನಾಟಕದ 150 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕವನ್ನು ಆಗಸ್ಟ್ 15ರೊಳಗೆ ಸ್ಥಾಪನೆ ಮಾಡಲು ನಿರ್ಧರಿಸಿದೆ. ಧಾರವಾಡದಲ್ಲಿ ಎರಡು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದು ಘಟಕವನ್ನು ಪ್ರಾಯೋಗಿಕವಾಗಿ ಆರಂಭಿಸಿ, ಒಂದು ರೂಪಾಯಿಗೆ ಹತ್ತು ಲೀಟರ್  ಶುದ್ಧ ನೀರು ಒದಗಿಸಲಾಗುತ್ತಿದೆ.

ಪ್ರತಿಷ್ಠಾನದ ಮುಖ್ಯಸ್ಥ ಹಾಗೂ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು  ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಿರಹಟ್ಟಿ ತಾಲ್ಲೂಕಿನ ಯತ್ತಿನಹಳ್ಳಿ ಮತ್ತು ಸುತ್ತಮುತ್ತಲಿನ ಕೆರೆಗಳನ್ನು ವೀಕ್ಷಿಸಿದಾಗ ನೀರು ಕಲುಷಿತಗೊಂಡಿರುವುದು ಕಂಡು ಬಂತು.

`ಒಂದು ಕಿ.ಮೀ. ದೂರದಿಂದ ನೀರು ತರಬೇಕು. ಕೆರೆಯ ನೀರಲ್ಲಿ ಹುಳುಗಳಿವೆ. ದನಗಳು ಕೂಡ ಈ ನೀರು ಕುಡಿಯಲ್ಲ. ನೀರನ್ನು ಎರಡು ಬಾರಿ ನೀರು ಸೋಸಿ ಕುಡಿಬೇಕು. ಛಲೋ ನೀರು ಕೊಡಸ್ರಿ, ಪೈಪ್‌ಲೈನ್ ಮೂಲಕ ಸರಬರಾಜು ಮಾಡುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದೆ. ಜ್ವರ, ಮೈ, ಕೈ ನೋವು, ಕಾಲುಗಳು ಊದಿಕೊಳ್ಳುತ್ತವೆ. ಬೆಳಿಗ್ಗೆ ಎದ್ದೇಳಲು ಆಗೋಲ್ಲ~ ಎಂದು ಗ್ರಾಮಸ್ಥರು ಪರಿಸ್ಥಿತಿಯನ್ನು ತೆರೆದಿಟ್ಟರು. ಪ್ರತಿಷ್ಠಾನ ಆರಂಭಿಸಿರುವ ಶುದ್ಧ ಕುಡಿಯುವ ನೀರು ಘಟಕದ ಕುರಿತು ಎಚ್.ಕೆ.ಪಾಟೀಲ ಮಾಹಿತಿ ನೀಡಿದರು.

ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಲಿ
`ಹದಿನೈದು ವರ್ಷದ ಹಿಂದಿನ ತಂತ್ರಜ್ಞಾನ ಇದು. ಹಲವು ಸಂಶೋಧನೆ, ಅಧ್ಯಯನ ಮತ್ತು ಪ್ರಯೋಗದ ಮೂಲಕ ಶುದ್ಧ ನೀರಿನ ಘಟಕ ಆರಂಭಿಸಲಾಗಿದೆ. ಘಟಕ ಸ್ಥಾಪನೆಗೆ ರೂ 8ರಿಂದ 10 ಲಕ್ಷ ವೆಚ್ಚವಾಗಲಿದೆ. `ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಜಾಗ ಒದಗಿಸಿದರೆ ಆದಷ್ಟು ಬೇಗ ನೀರು ಒದಗಿಸಬಹುದು.

ಸಾರ್ವಜನಿಕರು ದೇಣಿಗೆ ನೀಡಿ ಸಹಕರಿಸಬೇಕು. ಗದುಗಿನ ಮೂರು ಘಟಕಗಳಲ್ಲಿ 24x7 ನೀರು ಪೂರೈಸಲಾಗುತ್ತಿದೆ. ಸರ್ಕಾರ ಕಣ್ಣು ತೆರೆದು ಘಟಕ ಸ್ಥಾಪನೆ ಮಾಡಲು ಮುಂದಾಗಬೇಕು~ ಎಂದು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.