ADVERTISEMENT

ಹಳ್ಳಿಗರು ಕೊಟ್ಟದ್ದು ರೂ. 65 ಕೋಟಿ ಲಂಚ

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಅಧ್ಯಯನ ವರದಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಯುಕ್ತ ಮನೀಷ್‌ ಮೌದ್ಗಿಲ್‌ ಮತ್ತಿತರರು ಚಿತ್ರದಲ್ಲಿದ್ದಾರೆ. 	– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಶೇಕಡ 67ರಷ್ಟು ಕುಟುಂಬಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ವಿವಿಧ ಸೇವೆಗಳನ್ನು ಪಡೆಯಲು 2008–09ರಲ್ಲಿ ರೂ. 65 ಕೋಟಿ ಲಂಚ ನೀಡಿರುವುದು ಬೆಳಕಿಗೆ ಬಂದಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಅಧ್ಯಯನ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾ
ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದ ಜನರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ
ಈ ವರದಿಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಈ ರೀತಿಯ ಶೋಷಣೆಗಳನ್ನು ತಪ್ಪಿಸಲು ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ಯೋಚನೆ ಇದೆ’ ಎಂದರು.

ಹಳ್ಳಿಗಳಿಗೂ ‘ಸಿಡಿಪಿ’: ‘ಮುಂದಿನ ದಿನಗಳಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಗ್ರಾಮ ಪಂಚಾಯಿತಿಗೂ ‘ಸಮಗ್ರ ಅಭಿವೃದ್ಧಿ ಯೋಜನೆ’ (ಸಿಡಿಪಿ) ರೂಪಿಸಲಾಗುವುದು. ಈಗ ನಗರಗಳಿಗೆ ಮಾತ್ರ ಸಿಡಿಪಿ ರೂಪಿಸಲಾಗುತ್ತದೆ. ಮುಂದೆ ಗ್ರಾಮ ಪಂಚಾಯಿತಿಗಳಿಗೂ ಸಿಡಿಪಿ ರೂಪಿಸಿ, ಅದರ ಪ್ರಕಾರವೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಜಿಲ್ಲಾ ಮಟ್ಟದಲ್ಲೂ ಒಂದು ಸಿಡಿಪಿ ತಯಾರಿಸಲಾಗುವುದು’ ಎಂದರು.

ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವಾಗಿ ದೀರ್ಘ ಸಮಯದ ಬಳಿಕ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸುವ ಪದ್ಧತಿ ಈಗ ಇದೆ. ಅದನ್ನು ಬದಲಿಸಿ, ಯೋಜನೆಗಳ ಅನುಷ್ಠಾನ ಮಗಿದ ತಕ್ಷಣವೇ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.