ADVERTISEMENT

ಹುಲಿ ಯೋಜನೆ ಬೇಡ: ಕೇಂದ್ರದ ಮೇಲೆ ಒತ್ತಡ

​ಪ್ರಜಾವಾಣಿ ವಾರ್ತೆ
Published 26 ಜುಲೈ 2012, 19:30 IST
Last Updated 26 ಜುಲೈ 2012, 19:30 IST
ಹುಲಿ ಯೋಜನೆ ಬೇಡ: ಕೇಂದ್ರದ ಮೇಲೆ ಒತ್ತಡ
ಹುಲಿ ಯೋಜನೆ ಬೇಡ: ಕೇಂದ್ರದ ಮೇಲೆ ಒತ್ತಡ   

ಬೆಂಗಳೂರು: ಕುದುರೆ ಮುಖ ರಾಷ್ಟ್ರೀಯ ಉದ್ಯಾನದಲ್ಲಿ `ಹುಲಿ ಯೋಜನೆ~ ಕೈಗೆತ್ತಿಕೊಳ್ಳದಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಕೆ.ರಘುಪತಿ ಭಟ್, ಎಚ್.ಗೋಪಾಲ ಭಂಡಾರಿ ಅವರು ಹುಲಿ ಯೋಜನೆ ಕುರಿತು ವಿಷಯ ಪ್ರಸ್ತಾಪಿಸಿದರು. ಆಗ ಪ್ರತಿಕ್ರಿಯಿಸಿದ ಸಚಿವರು, `ಹುಲಿ ಯೋಜನೆಗೆ ರಾಜ್ಯದ ವಿರೋಧವಿದೆ. ಇದನ್ನು ಕೈಬಿಡುವಂತೆ ಕೋರಿ ರಾಜ್ಯ ಸರ್ಕಾರ ಅಧಿಕೃತವಾಗಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಿದೆ~ ಎಂದರು.

ಅಲ್ಲದೆ ಭದ್ರಾ ಹುಲಿ ಅಭಯಾರಣ್ಯ ವಿಸ್ತರಣೆ ಮಾಡಬೇಡಿ ಎಂದು ಕೇಂದ್ರವನ್ನು ಒತ್ತಾಯಿಸಲಾಗುವುದು. ರಾಜ್ಯದಲ್ಲಿ ಈಗಾಗಲೇ ಐದು ಹುಲಿ ಅಭಯಾರಣ್ಯಗಳಿವೆ. ಇವುಗಳನ್ನು ಹೆಚ್ಚಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ರಘುಪತಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಯೋಜನೆ ಜಾರಿ ಮಾಡಿದರೆ 142 ಗ್ರಾಮಗಳ 1,500 ಕುಟುಂಬಗಳಿಗೆ ತೊಂದರೆ ಆಗುತ್ತದೆ. ಸರ್ಕಾರ ಇದನ್ನು ಒಪ್ಪಬಾರದು ಎಂದು ಆಗ್ರಹಿಸಿದರು. ಗೋಪಾಲ ಭಂಡಾರಿ, ಎಂ.ಪಿ.ಕುಮಾರಸ್ವಾಮಿ ಅವರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಕುದುರೆಮುಖದಲ್ಲಿ ಪೊಲೀಸ್ ತರಬೇತಿ ಕೇಂದ್ರ ಮಾಡುವುದಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಕಟಿಸಿದ್ದರು.

ಇದರಿಂದ ನಕ್ಸಲರ ನಿಗ್ರಹ ಸಾಧ್ಯವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಈಚೆಗೆ ಕುದುರೆಮುಖದಲ್ಲಿ ಹುಲಿ ಸಂರಕ್ಷಣೆ ಯೋಜನೆ ಜಾರಿ ಮಾಡುತ್ತೇವೆ. ಹೀಗಾಗಿ ಪೊಲೀಸ್ ತರಬೇತಿ ಕೇಂದ್ರ ತೆರೆಯಲು ಅವಕಾಶ ಇಲ್ಲ ಎಂದಿದ್ದಾರೆ. ಇದು ಸರಿಯಲ್ಲ. ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಒತ್ತಡ ಹೇರಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.