ಹುಬ್ಬಳ್ಳಿ: `ಹೂಗಾರ ಸಮಾಜದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಮಾಜದ ರಾಜ್ಯ ಮಟ್ಟದ ಪ್ರಥಮ ಸಮಾವೇಶವನ್ನು ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಲಾಗಿದೆ~ ಎಂದು ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಲೋಚನೇಶ ಹೂಗಾರ ಶನಿವಾರ ಇಲ್ಲಿ ಹೇಳಿದರು.
`ಹೂಗಾರ ಸಮುದಾಯವನ್ನು 2-ಎ ಪ್ರವರ್ಗಕ್ಕೆ ಸೇರಿಸಬೇಕು. ಸಮುದಾಯದವರನ್ನು ಕುಶಲಕರ್ಮಿಗಳೆಂದು ಪರಿಗಣಿಸಿ ಸರ್ಕಾರಿ ಸವಲತ್ತು ನೀಡಬೇಕು. ನಿರುದ್ಯೋಗ ಸಮಸ್ಯೆ ನಿವಾರಿಸಬೇಕು. ಸಮುದಾಯ ಭವನ, ಶಿಕ್ಷಣ ಸಂಸ್ಥೆ ಆರಂಭಕ್ಕೆ ಹುಬ್ಬಳ್ಳಿ-ಧಾರವಾಡ ಅಥವಾ ಬೆಳಗಾವಿಯಲ್ಲಿ ಜಮೀನು ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಸಮಾವೇಶದಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಗುವುದು~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಗುರುವ, ಜೀರ, ಪೂಜಾರ, ಕುಲಾರಿ, ತಾಂಬೋಳಿ ಎಂದೆಲ್ಲಾ ಕರೆಸಿಕೊಳ್ಳುವ ಹೂಗಾರ ಸಮುದಾಯದ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ಮುನ್ನ ನಗರದ ಬಸವವನದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶರಣ ಮಾದಯ್ಯನವರ ಭಾವಚಿತ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನಾವರಣಗೊಳಿಸುವರು~ ಎಂದು ಹೇಳಿದರು.
ರೈಲು ವೇಳೆ ಬದಲು
ಹುಬ್ಬಳ್ಳಿ: ಶಿವಮೊಗ್ಗ ಟೌನ್- ಬೀರೂರು- ಬೆಂಗಳೂರು ಪ್ಯಾಸೆಂಜರ್ ರೈಲು (ಸಂಖ್ಯೆ 56918) ಸಂಚಾರ ಸಮಯ ಇದೇ ತಿಂಗಳ 5ರಿಂದ ಬದಲಾಗಲಿದೆ. ಈ ರೈಲು ಶಿವಮೊಗ್ಗದಿಂದ ಮಧ್ಯಾಹ್ನ 1.50ಕ್ಕೆ ಬದಲಾಗಿ 2.45ಕ್ಕೆ ಹೊರಟು 4.25ಕ್ಕೆ ಬೀರೂರು ನಿಲ್ದಾಣ ತಲುಪಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.