ADVERTISEMENT

ಹೈಕೋರ್ಟ್‌ಗೆ ಭದ್ರತೆ ಕೊರತೆ?

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST

ಬೆಂಗಳೂರು: ‘ಹೈಕೋರ್ಟ್‌ನ ಭದ್ರತೆಗೆ ಪೊಲೀಸ್‌ ಸಿಬ್ಬಂದಿಯ ಕೊರತೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಈ ಕುರಿತಂತೆ ಬುಧವಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯವನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇವೆಲ್ಲಾ ಮಾಧ್ಯಮದಲ್ಲಿ ಪ್ರಕಟವಾಗುವುದು ಬೇಡ’ ಎಂದು ತಿಳಿಸಿದರು.

ಬುಧವಾರ ಮಧ್ಯಾಹ್ನ ಕೋರ್ಟ್‌ ಹಾಲ್‌ 21ರಲ್ಲಿ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಕೋರ್ಟ್‌ ಹಾಲ್‌ನಲ್ಲಿ ವಕೀಲರು ಮತ್ತು ಪತ್ರಕರ್ತರು ಕಿಕ್ಕಿರಿದು ತುಂಬಿದ್ದರು. ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಲೋಕಾಯುಕ್ತರ ಮೇಲೆ ಹಲ್ಲೆ ನಡೆದ ವಿಷಯ ಹರಿದಾಡುತ್ತಿತ್ತು. ಆಗ ಕೋರ್ಟ್‌ ಹಾಲ್‌ ಹೊರಗೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

ADVERTISEMENT

ಕೊರತೆ ಇದೆ: ಈ ಕುರಿತಂತೆ ಪ್ರತಿಕ್ರಿಯಿಸಿದ ವಕೀಲ ಎನ್‌.ಪಿ.ಅಮೃತೇಶ್‌, ‘ಹೈಕೋರ್ಟ್‌ನ ಐದು ಗೇಟುಗಳಲ್ಲೂ ಲೋಹ ಶೋ ಧಕ ಯಂತ್ರಗಳನ್ನು ಇರಿಸಲಾಗಿದೆ. ಆದರೆ, ಆಗಾಗ್ಗೆ ಇವು ಕೆಟ್ಟು ಹೋಗುತ್ತಲೇ ಇರುತ್ತವೆ. ಸಿಬ್ಬಂದಿ ಕೊರತೆಯೂ ಸಾಕಷ್ಟು ಇದೆ’ ಎಂದರು.

‘ಲೋಹ ಶೋಧಕ ಯಂತ್ರಗಳೆಲ್ಲಾ ಯಾವಾಗಲೂ ಕೆಟ್ಟಿರುತ್ತವೆ. ಸಿಬ್ಬಂದಿ ತಮ್ಮ ಕೈಗಳಲ್ಲೇ ಶೋಧಕ ಯಂತ್ರ ಹಿಡಿದು ಪರೀಕ್ಷಿಸಿ ಒಳಬರುವವರನ್ನು ಬಿಡುತ್ತಾರೆ’ ಎಂದು ಅಮೃತೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.