ಬೆಂಗಳೂರು: ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ‘ಆಧಾರ್’ ಯೋಜನೆಯಲ್ಲೂ ಅಕ್ರಮ ನಡೆದಿದೆ. ಇದೊಂದು ನಿಷ್ಪ್ರಯೋಜಕ ಯೋಜನೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಮಂಗಳವಾರ ಇಲ್ಲಿ ಹೇಳಿದರು.
ಯೂತ್ ಫಾರ್ ಡೆಮಾಕ್ರಸಿ ಸಂಸ್ಥೆ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದು ದೇಶದ ವ್ಯಕ್ತಿ ಮತ್ತೊಂದು ದೇಶದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದರೆ ಅಂತಹವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ, ನಮ್ಮಲ್ಲಿ ವಿದೇಶದಿಂದ ಬಂದವರಿಗೂ ಆಧಾರ್ ಸಂಖ್ಯೆ ನೀಡಲಾಗುತ್ತಿದೆ. ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಅವರೇ ಚುನಾವಣೆಗೆ ಸ್ಪರ್ಧಿಸಿ, ಸಚಿವರಾದರೂ ಆಶ್ಚರ್ಯ ಇಲ್ಲ’ ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳಲ್ಲಿನ ಬಡವರಿಗೆ ಕಾಲೇಜು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಾಗುವುದು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖಿ ಮಾತನಾಡಿ, ‘ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಖಾಸಗಿ ಮತ್ತು ಸರ್ಕಾರಿ ಶಾಲಾ– ಕಾಲೇಜುಗಳಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡಲಾಗುವುದು’ ಎಂದರು.
ಸಂವಾದದಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸೇರಿ ಇತರರು ಪಾಲ್ಗೊಂಡಿದ್ದರು.
ನಿರಾಧಾರ...
‘ಗುರುತಿನ ಸಂಖ್ಯೆ ನೀಡುವುದನ್ನು ಆಧಾರ್ ಎನ್ನುವುದಕ್ಕಿಂತ ನಿರಾಧಾರ ಎನ್ನುವುದೇ ಉತ್ತಮ. ಇದನ್ನು ಸುಪ್ರೀಂಕೋರ್ಟ್ ಕೂಡ ತಿರಸ್ಕರಿಸಿದೆ. ಈ ಸಲುವಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದು ಕೂಡ ವ್ಯರ್ಥ ಕಸರತ್ತು.
– ಅನಂತಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.