ಚಿಕ್ಕಮಗಳೂರು: ‘ಭಯೋತ್ಪಾದನೆ ಚಟುವಟಿಕೆಗಳಿಗೆ ರಾಜ್ಯದಲ್ಲಿ ಆಸ್ಪದ ನೀಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಗೃಹ ಇಲಾಖೆ ಕೈಗೊಳ್ಳಲಿದೆ. ಎನ್‌ಎಸ್‌ಜಿ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಭಯೋತ್ಪಾದಕ ಚಟುವಟಿಕೆ ನಿಗ್ರಹಿಸಲು ‘ಗರುಡ’ ಪಡೆ ಸಜ್ಜುಗೊಳಿಸಲಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಭಯೋತ್ಪಾದಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಅವರನ್ನು ಸಮರ್ಥವಾಗಿ ಹತ್ತಿಕ್ಕಲು ನಮ್ಮ ಪೊಲೀಸ್ ಪಡೆಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಲು, ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದ್ದೇವೆ. ಆಧುನಿಕ ಶಸ್ತ್ರಬಳಸುವ ಬಗ್ಗೆಯೂ ಸೂಕ್ತ ತರಬೇತಿ ಯನ್ನು ಪೊಲೀಸರಿಗೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ರಾಜ್ಯದಲ್ಲೂ ಐಎಸ್ ಉಗ್ರರ ಚಟುವಟಿಕೆ ಪ್ರಾರಂಭವಾಗುತ್ತಿರುವುದು ಶಂಕಿತರ ಬಂಧನದ ನಂತರ ಗೊತ್ತಾಗಿದೆ. ಅನಾಹುತ ನಡೆಯದಂತೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.