ADVERTISEMENT

‘ನರ್ಮ್‌’ ಆಶಯ ಮುಕ್ಕಾಗುವ ಅಪಾಯ

ಯೋಜನೆಗಳ ಆಯ್ಕೆಯಲ್ಲಿ ಸ್ಥಳೀಯ ಸಂಸ್ಥೆಗಳ ಸ್ವೇಚ್ಛೆ

​ಪ್ರಜಾವಾಣಿ ವಾರ್ತೆ
Published 30 ಮೇ 2014, 19:30 IST
Last Updated 30 ಮೇ 2014, 19:30 IST
‘ನರ್ಮ್‌’ ಆಶಯ ಮುಕ್ಕಾಗುವ ಅಪಾಯ
‘ನರ್ಮ್‌’ ಆಶಯ ಮುಕ್ಕಾಗುವ ಅಪಾಯ   

ಬೆಂಗಳೂರು: ‘ನರ್ಮ್‌’ ಅಡಿಯಲ್ಲಿ ಆರ್ಥಿಕ ನೆರವು ಪಡೆದು­ಕೊಳ್ಳಲು ನಗರ ಸ್ಥಳೀಯ ಆಡಳಿತ ಸಂಸ್ಥೆಗಳು ‘ನಗರಾಭಿ­ವೃದ್ಧಿ ಯೋಜನೆ’ (ಸಿಡಿಪಿ) ಮಾರ್ಗದರ್ಶಿ ಸೂತ್ರಗಳ ಆಧಾ­ರದಲ್ಲಿ ರೂಪಿಸಲಾದ ಯೋಜನೆಗಳನ್ನೇ ಆಯ್ಕೆ ಮಾಡಿ­ಕೊಳ್ಳಬೇಕು. ಇದು ನಿಯಮ. ವಾಸ್ತವ ಬೇರೆಯೇ ಇದೆ.

‘ಯೋಜನೆಗಳನ್ನು ರೂಪಿಸುವ ಮತ್ತು ಆಯ್ಕೆ ಮಾಡಿ­ಕೊಳ್ಳುವ ಪ್ರಕ್ರಿಯೆಯಲ್ಲಿ ನಗರ ಸ್ಥಳೀಯ ಆಡಳಿತ ಸಂಸ್ಥೆಗಳು ಹೆಚ್ಚು ಸ್ವತಂತ್ರವಾಗಿ ವರ್ತಿಸಿವೆ. ಇದರಿಂದ ‘ನರ್ಮ್‌’ನ ಒಟ್ಟು ಆಶಯವೇ ಮುಕ್ಕಾಗುವ ಅಪಾಯ ಇದೆ’ ಎಂದು ‘ನಿಯಾಸ್‌’ ತಂಡದ ಮೌಲ್ಯಮಾಪನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

‘ನರ್ಮ್‌’ ಅನ್ನು ಒಂದು ಸಮಗ್ರ ಯೋಜನೆಯೆಂದು ಪರಿಗ­ಣಿ­ಸದೇ ಅದೊಂದು ಪರ್ಯಾಯ ಹಣಕಾಸು ಮೂಲ­ವೆಂದು ಭಾವಿಸಿರುವ ಸ್ಥಳೀಯ ಸಂಸ್ಥೆಗಳು, ತಾವು ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳಿಗೆ ‘ನರ್ಮ್‌’ ಅನುದಾನ ಪಡೆದುಕೊಳ್ಳಲು ಯತ್ನಿಸಿವೆ.
ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಮೊದಲಾದ ಸಂಸ್ಥೆಗಳಿಂದ ಸಾಲ ಪಡೆದು ಯೋಜನೆಗಳನ್ನು ಜಾರಿಗೊಳಿ­ಸುವ ಸಂಸ್ಥೆಗಳು, ‘ನರ್ಮ್‌’ ಅನ್ನು ತಮ್ಮ ಸಾಲದ ಹೊರೆ ತಗ್ಗಿಸಿಕೊಳ್ಳುವ ಸಾಧನವಾಗಿ ಬಳಸಿಕೊಳ್ಳಲು ಪ್ರಯತ್ನಿಸಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಯಾವುದೇ ಯೋಜನೆಯನ್ನು ಆಯ್ಕೆ ಮಾಡುವ ಮುನ್ನ ಅದನ್ನು ಅನುಷ್ಠಾನಗೊಳಿಸುವ ಸಂಸ್ಥೆಯು ಸಾಧ್ಯಾಸಾಧ್ಯತೆ ವಿಶ್ಲೇಷಣೆಯನ್ನು ಮಾಡಿಸಬೇಕು. ಈ ವಿಶ್ಲೇಷಣೆಯನ್ನು ಸಂಸ್ಥೆಗಳು ಆಂತರಿಕವಾಗಿಯೇ ಮಾಡಿಕೊಳ್ಳುತ್ತಿವೆ.

‘ನರ್ಮ್‌’ ಅಡಿಯಲ್ಲಿ ಯೋಜನೆಯ ಮಂಜೂರಾತಿಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ ಮೇಲೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯು ಮೊದಲಿಗೆ ವಿವರವಾದ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಸಲಹೆಗಾರರನ್ನು ನೇಮಿಸಬೇಕು. ‘ಡಿಪಿಆರ್‌’ ತಯಾರಿ ಮತ್ತು ಯೋಜನೆಗಳ ಅನುಷ್ಠಾನದ ನಿರ್ವಹಣೆ ನೋಡಿಕೊಳ್ಳುವ ಪ್ರಕ್ರಿಯೆಯಲ್ಲಿ ಸಲಹೆಗಾರರ ಪಾತ್ರ ಪ್ರಮುಖವಾದುದು.

‘ಡಿಪಿಆರ್‌’ ತಯಾರಿಗೆ ಮುನ್ನ ಸ್ಥಳೀಯ ಸಂಸ್ಥೆಗಳು ನಡೆಸಿದ ಸಾಧ್ಯಸಾಧ್ಯತಾ ವಿಶ್ಲೇಷಣೆ­ಯಲ್ಲಿ ತಪ್ಪುಗಳಾಗಿವೆ ಎಂದು ಕೆಲವು ಸಲಹೆಗಾರರು ಅಭಿ­ಪ್ರಾಯಪಟ್ಟಿದ್ದಾರೆ. ಯೋಜನೆ ಪೂರ್ಣಗೊಳ್ಳಲು ಬೇಕಾದ ಕಾಲಾವಧಿ ಮತ್ತು ಮಾನವ ಸಂಪನ್ಮೂಲದ ಬಗ್ಗೆ ತಪ್ಪು ಅಂದಾಜು ಮಾಡಲಾ­ಗಿದೆ. ಇಂತಹ ತಪ್ಪು ಸಹಜವಾಗಿಯೇ ಮುಂದಿನ ಪರಿಣಾಮ­ಗಳಲ್ಲಿ ಪ್ರತಿಫಲನಗೊಳ್ಳುವುದು.

ಒಂದೆಡೆ,  ಸರ್ಕಾರದ ಚಿಂತನಾ ಕ್ರಮದೊಂದಿಗೆ ಸಲಹೆಗಾ­ರರ ನಿಲುವುಗಳು ಹೊಂದಿಕೆಯಾಗದಿದ್ದರೆ ಅಧಿಕಾರಿಗಳು ಅಂತಹ ಶಿಫಾರಸ್‌ ಅನ್ನು ಸ್ವೀಕರಿಸುವುದೇ ಇಲ್ಲ.  ಇನ್ನೊಂದೆಡೆ, ಅಧಿಕಾರಿಗಳ ಆಲೋಚನೆಗೆ ತಕ್ಕಂತೆ ಸಲಹೆಗಾರರು ಯೋಜನೆ­ಗಳನ್ನು ಪರಿಷ್ಕರಿಸಿದರೆ ಯೋಜನೆಯ ಒಟ್ಟಾರೆ ಮೌಲ್ಯ ಕಡಿಮೆ­ಯಾಗುತ್ತದೆ.

ಅಧಿಕಾರಿಗಳ ಚಿಂತನಾ ಕ್ರಮದಲ್ಲಿನ ನ್ಯೂನತೆ­ಗಳನ್ನು ಸ್ಪಷ್ಟವಾಗಿ ಗುರುತಿಸಿದಾಗ ಹಾಗೂ ಆ ನ್ಯೂನತೆ­ಗ­ಳನ್ನು ಸರಿ­ಪಡಿಸಲು ಸಲಹೆಗಾರರನ್ನು ಬಳಸಿಕೊಂಡಾಗ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಂತಹ ಸನ್ನಿ­ವೇಶ­ದಲ್ಲಿ ಅಧಿಕಾರಿಗಳು ಸಲಹೆಗಾರರ ಸಲಹೆ ಸೂಚನೆ­ಗಳನ್ನು ಸ್ವೀಕರಿಸಿ, ಪೂರ್ಣಪ್ರಮಾಣದಲ್ಲಿ ಯೋಜನೆಯ ಜವಾಬ್ದಾರಿ ಹೊರುತ್ತಾರೆ ಎಂದು ವರದಿ ತಿಳಿಸಿದೆ.

‘ಮೂಲಸೌಕರ್ಯಕ್ಕೆ ಹೆಚ್ಚು; ಬಡತನ ನಿರ್ಮೂಲನೆಗೆ ಕಡಿಮೆ’

ಕರ್ನಾಟಕದಲ್ಲಿ ‘ನರ್ಮ್‌’ ಅಡಿಯಲ್ಲಿ ಮಂಜೂ­ರಾದ ಯೋಜನೆಗಳ ಒಟ್ಟು ವೆಚ್ಚದಲ್ಲಿ ಮೂರನೇ ಎರಡರಷ್ಟು ಭಾಗವು ನಗರ

ಮೂಲಸೌಕರ್ಯ ಮತ್ತು ಆಡಳಿತ ಯೋಜನೆಗಳಿಗಾಗಿ ಬಿಡುಗಡೆಯಾಗಿದೆ. ಸಣ್ಣ ಮತ್ತು ಮಧ್ಯಮ ಪಟ್ಟಣಗಳಿಗಾಗಿ ನಗರ ಮೂಲ­ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಐದನೇ ನಾಲ್ಕು ಭಾಗದಷ್ಟು ಹಣ ಕೊಡಲಾಗಿದೆ.

ಸಣ್ಣ, ಮಧ್ಯಮ ಪಟ್ಟಣಗಳಲ್ಲಿ  ಬಡತನ ನಿರ್ಮೂ­ಲನಾ ಕಾರ್ಯಕ್ರಮಗಳಿಗಿಂತ ಎರಡು ಪಟ್ಟು ಹೆಚ್ಚು ಹಣವನ್ನು ಮೂಲಸೌಕರ್ಯ ಯೋಜನೆಗಳಿ­ಗಾಗಿ ವಿನಿ­ಯೋಗಿಸಲಾಗಿದೆ. ಬೆಂಗಳೂರು, ಮೈಸೂರು ನಗರ­ಗ­ಳಲ್ಲಿ ಬಡವರಿಗೆ ಕನಿಷ್ಠ ಸೌಕರ್ಯ ಕಲ್ಪಿಸುವ ಕಾರ್ಯ­ಕ್ರಮಗಳಿಗೆ ನೀಡಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಹಣವನ್ನು ಮೂಲಸೌಕರ್ಯ ಯೋಜನೆಗಳಿಗೆ ನೀಡಲಾಗಿದೆ.

ಬೆಂಗಳೂರಿಗೆ ಸಿಂಹಪಾಲು
ಯಾರೇ ಆದರೂ ಊಹಿಸಬಹು­ದಾದಂತೆ ‘ನರ್ಮ್‌’ ಅನುದಾನ­ದಲ್ಲಿ ಬೆಂಗಳೂರಿಗೆ ಅಧಿಕ ಪಾ­ಲನ್ನು ಕೊಡಲಾಗಿದೆ. ರಾಜ್ಯಕ್ಕೆ ಬಿಡು­ಗಡೆಯಾಗಿರುವ ಒಟ್ಟು ಅನುದಾ­ನದಲ್ಲಿ ಶೇ 61ರಷ್ಟು ಹಣ ಬೆಂಗ­ಳೂರಿಗೇ ಸಿಕ್ಕಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಸಿಕ್ಕಿ­ರುವ ಹಣವು ಒಟ್ಟು ಅನುದಾನದ  ಶೇಕಡಾ 80ರಷ್ಟು ಆಗುತ್ತದೆ.

ADVERTISEMENT

ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ  ಫ್ಲೈಓವರ್‌, ಗ್ರೇಡ್‌ ಸಪರೇಟರ್‌, ಅಂಡರ್‌ಪಾಸ್‌ ಕಾಮಗಾರಿಗಳಿಗೆ  ಶೇ33 ರಷ್ಟು, ಬೆಂಗಳೂರಿನಲ್ಲಿ ಮಳೆ ನೀರು ಕಾಲುವೆ ಮತ್ತು ಚರಂಡಿ­ಗಳ ಅಭಿವೃದ್ಧಿ ಕಾರ್ಯಕ್ರ­ಮ­ಗಳಿಗೆ ಶೇ 33 ರಷ್ಟು ಹಣ ನೀಡ­ಲಾಗಿದೆ. ‘ಯುಐಜಿ’ಯಲ್ಲಿನ ಸಾರಿ­ಗೆ­ಯೇತರ ವಿಭಾಗದಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿರು­ವುದು ನೀರು ಪೂರೈಕೆ ಕಾರ್ಯ­ಕ್ರಮಗಳಿಗೆ. ನೀರಿನ ಯೋಜ­ನೆ­ಗಳಿಗೆ ಶೇ 33.9ರಷ್ಟು ಹಣ ದೊರೆತಿದೆ.

ಸಂಚಾರ ವ್ಯವಸ್ಥೆ ಮತ್ತು ನೀರಿನ ಯೋಜನೆಗಳಿಗೆ ಶೇ 78ರಷ್ಟು ಅನು­ದಾನ ಸಿಕ್ಕಿದೆ. ಉಳಿದ ಶೇ 22ರಷ್ಟು ಹಣವನ್ನು ಮಳೆ ನೀರು ಕಾಲುವೆ, ಪಾರಂಪರಿಕ ತಾಣಗಳ ಸಂರಕ್ಷಣೆ, ಮೃಗಾಲಯ ಮೂಲಸೌಕರ್ಯ ಮತ್ತು ಘನ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳಿಗೆ ವಿತರಿಸಲಾಗಿದೆ.

ಹತ್ತು ಜಿಲ್ಲೆಗಳಿಗೆ ಒಂದೂ ಯೋಜನೆ ಸಿಕ್ಕಿಲ್ಲ

ಚಾಮರಾಜನಗರ, ಕೊಡಗು, ಉಡುಪಿ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಗುಲ್ಬರ್ಗ ಮತ್ತು ಬೀದರ್‌– ಈ ಹತ್ತು ಜಿಲ್ಲೆಗಳು ಯೋಜನೆ ಪಡೆಯುವ ಅರ್ಹತೆ ಹೊಂದಿದ್ದರೂ ಒಂದೇ ಒಂದು ಯೋಜನೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.
ಈ ರೀತಿಯ ಯೋಜನೆಗಳ ವಿತರಣೆಗೆ ಮೇಲ್ನೋಟಕ್ಕೆ ಯಾವುದೇ ಕಾರಣವೂ ಕಾಣುತ್ತಿಲ್ಲ. ಯಾವುದೇ ಯೋಜನೆ ಪಡೆಯದ ಜಿಲ್ಲೆಗಳ ಪೈಕಿ ವೇಗವಾಗಿ ನಗರೀಕರಣಗೊಳ್ಳುತ್ತಿರುವ ನಗರವೂ ಇದೆ.

ಉದಾ: ಉಡುಪಿ. ಅದೇ ರೀತಿ ನಗರೀಕರಣಕ್ಕೆ ಬೆನ್ನು ಮಾಡಿರುವ ಪಟ್ಟಣವೂ ಇದೆ. ಉದಾ: ಕೊಡಗು. ಗುಲ್ಬರ್ಗದಂತಹ ಜಿಲ್ಲೆಯಲ್ಲಿ ಜನಸಂಖ್ಯಾ ಒತ್ತಡ ಹೆಚ್ಚಾಗಿಯೇ ಇದೆ. ಉಡುಪಿಯಲ್ಲಿ ತ್ವರಿತಗತಿಯ ನಗರೀಕರಣಕ್ಕೆ ಅದರದ್ದೇ ಆದ ಆಂತರಿಕ ಬೆಂಬಲದ ಅಂಶ ಅಥವಾ ಕಾರಣ ಇಲ್ಲದಿರುವುದು ಆಸಕ್ತಿಕರವಾಗಿದೆ.

ವಿಕೇಂದ್ರೀಕರಣ ಸರಿ, ಆದರೆ...
ನೆಲದ ವಾಸ್ತವ ಅರಿತಿರುವ ಸ್ಥಳೀಯ ಸಂಸ್ಥೆಗಳು ಆಯಾ ನಗರಗಳ ನೈಜ ಅಗತ್ಯಗಳು ಯಾವುವು ಎಂಬುದನ್ನು ಸರಿಯಾಗಿ ಗುರುತಿಸಬಲ್ಲವು. ಈ ನೆಲೆಯಿಂದ ಮತ್ತು ವಿಕೇಂದ್ರೀಕರಣದ ದೃಷ್ಟಿ­ಯಿಂದ ಯೋಜನೆಗಳ ಆಯ್ಕೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಇರುವುದು ಸರಿಯಾದ ಕ್ರಮ.

ಆದರೆ ಚುನಾಯಿತ ಜನಪ್ರತಿ­ನಿಧಿಗಳಿರುವ ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳು ನಡೆಸುವ  ಸಂಸ್ಥೆ­ಗಳು ತೆಗೆದುಕೊಳ್ಳುವ ನಿರ್ಧಾ­ರ­ಗಳಲ್ಲಿ ಬಹಳ ವ್ಯತ್ಯಾಸ ಇರುವು­ದನ್ನು ಗಮನಿಸಬೇಕು. ಬೆಂಗಳೂರು ಮತ್ತು ಮೈಸೂರುಗಳಲ್ಲಿ ಜನಪ್ರತಿ­ನಿಧಿ­ಗಳಿರುವ ಸಂಸ್ಥೆಗಳಿಗೆ ಮಂಜೂ­ರಾಗಿರುವ ಯೋಜನೆಗಳಿಗಿಂತ ಹೆಚ್ಚು ವೆಚ್ಚದ ಯೋಜನೆಗಳು ಇತರ ಸಂಸ್ಥೆಗಳಿಗೆ ಮಂಜೂರಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.