ಬೆಂಗಳೂರು: ಮೈಸೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ನೀಡುವ ‘ಮೊಬೈಲ್ ಸಿಮ್’ ಘಟನಾ ಸ್ಥಳದಲ್ಲಿ ಸಿಕ್ಕಿದ್ದು, ಅದರ ಮಾಹಿತಿ ಆಧರಿಸಿ ಎನ್‌ಐಎ ಹಾಗೂ ಇತರೆ ತನಿಖಾ ತಂಡಗಳು ತನಿಖೆಯನ್ನು ಚುರುಕುಗೊಳಿಸಿವೆ.
‘ಘಟನೆ ನಡೆದ ಮರುದಿನ ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಜಿಲ್ಲಾ ನ್ಯಾಯಾಲಯದ ಶೌಚಾಲಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಶೌಚಾಲಯದ ಗೋಡೆ ಪಕ್ಕದಲ್ಲಿದ್ದ ಅವಶೇಷಗಳಡಿ ಸಿಮ್ ಒಂದು ದೊರಕಿದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಿಮ್ ಮೇಲಿರುವ 24 ಅಂಕಿಗಳ ಸಹಾಯದಿಂದ ತಾಂತ್ರಿಕ ಅಧಿಕಾರಿಗಳು, ಈಗಾಗಲೇ ಅದರ ಪೂರ್ವಾಪರವನ್ನು ತಿಳಿದುಕೊಳ್ಳುತ್ತಿದ್ದಾರೆ. ಆಂಧ್ರಪ್ರದೇಶದ ನೆಟ್‌ವರ್ಕ್‌ನಲ್ಲಿ ಸಿಮ್ ಬಳಕೆಯಾಗಿರುವುದು ಸದ್ಯಕ್ಕೆ ಗೊತ್ತಾಗಿದೆ. ಹೊರ ಹಾಗೂ ಒಳ ಕರೆಗಳ ಬಗ್ಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಿದೆ. ಆಕಸ್ಮಾತ್ ತನಿಖೆಗೆ ಸಹಾಯಕವಾಗುವ ಮಾಹಿತಿ ಸಿಮ್‌ನಿಂದ ಲಭ್ಯವಾದರೆ ಬಹುಬೇಗನೇ ಪ್ರಕರಣವನ್ನು ಭೇದಿಸಬಹುದು’ ಎಂದು ಮಾಹಿತಿ ನೀಡಿದರು.
ಏಪ್ರಿಲ್ 7ರಂದು ಆಂಧ್ರಪ್ರದೇಶದ ಚಿತ್ತೂರು ಹಾಗೂ ಜೂನ್ 15ರಂದು ಕೇರಳದ ಕೊಲ್ಲಂ ನ್ಯಾಯಾಲಯದ ಆವರಣದಲ್ಲಿ ಸಂಭವಿಸಿದ್ದ ಸ್ಫೋಟ ಗಳಿಗೂ ಹಾಗೂ ಮೈಸೂರಿನ ಸ್ಫೋಟಕ್ಕೂ ಹೋಲಿಕೆ ಕಂಡುಬಂದಿದೆ. ಜತೆಗೆ ಜಂಟಿಯಾಗಿ ತನಿಖೆ ನಡೆಸುತ್ತಿರುವ ಎನ್‌ಐಎ, ಕೇಂದ್ರ ಗುಪ್ತಚರ ಅಧಿಕಾರಿಗಳು ಹಾಗೂ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಪೊಲೀಸರು ಆ ಹೋಲಿಕೆಯನ್ನು ಸಾಬೀತುಪಡಿಸುವ ಸಾಕ್ಷ್ಯಗಳ ಸಂಗ್ರಹದಲ್ಲಿ ನಿರತರಾಗಿದ್ದಾರೆ.
ಪರಿಣತ ಅಧಿಕಾರಿಗಳ ಪ್ರಾಥಮಿಕ ತನಿಖೆ ಪ್ರಕಾರ, ಮೈಸೂರು ಸ್ಫೋಟದಲ್ಲಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆ ಕೈವಾಡವಿರುವ ಶಂಕೆ ಇದ್ದು, ಅದರೊಂದಿಗೆ ‘ಅಲ್ ಉಮಾ ಸಂಘಟನೆ’ ಹೆಸರು ಸಹ ಕೇಳಿಬಂದಿದೆ.
‘ಮಲ್ಲೇಶ್ವರ ಬಿಜೆಪಿ ಕಚೇರಿ ಎದುರು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಲ್ ಉಮಾ ಸಂಘಟನೆ ಹೆಸರು ಬಯಲಾಗಿತ್ತು. ಈಗ ಅದೇ ಸಂಘಟನೆಯು ‘ಬೇಸ್ ಮೂವ್‌ಮೆಂಟ್’ ಎಂಬ ಕಾನೂನುಬಾಹಿರ ಕಾರ್ಯಾಚರಣೆಯೊಂದಕ್ಕೆ ಚಾಲನೆ ನೀಡಿದೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿ, ತನ್ನ ಇರುವಿಕೆಯನ್ನು ತೋರಿಸುವುದು ಇದರ ಉದ್ದೇಶವಾಗಿದೆ ಎಂಬ ಮಾಹಿತಿಯನ್ನು ಗುಪ್ತಚರ ವಿಭಾಗವು ಸಂಗ್ರಹಿಸಿದೆ. ಅದೇ ಆಧಾರದಲ್ಲಿ ಆ ಸಂಘಟನೆ ಮೇಲೆ ಅನುಮಾನ ವ್ಯಕ್ತವಾಗಿದೆ’ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.
‘ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಈ ಸಂಘಟನೆ ಹೆಚ್ಚು ಸಕ್ರಿಯವಾಗಿದ್ದು, ಕರ್ನಾಟಕದಲ್ಲೂ ಬೇರುಗಳಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ರಾಜ್ಯದ ಗುಪ್ತಚರ ವಿಭಾಗದ ಕೆಲ ಪರಿಣತ ಅಧಿಕಾರಿಗಳು ಈಗಾಗಲೇ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿಂದಲೇ ಮಾಹಿತಿ ಕಳುಹಿಸುತ್ತಿದ್ದಾರೆ. ಅದರ ಆಧಾರದಲ್ಲಿ ರಾಜ್ಯದಲ್ಲಿರುವ ಆ ಸಂಘಟನೆಗಳ ಬೇರು ಪತ್ತೆ ಹಚ್ಚಲಾಗುವುದು’ ಎಂದು ತನಿಖೆ ಹೊಣೆ ಹೊತ್ತಿರುವ ರಾಜ್ಯದ ಅಧಿಕಾರಿಯೊಬ್ಬರು ತಿಳಿಸಿದರು.
ಸುಳಿವು ನೀಡಿತ್ತು ಬಿನ್ ಲಾಡೆನ್ ಫೋಟೊ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸ್ಫೋಟ ನಡೆದ ಕೆಲ ದಿನಗಳ ಬಳಿಕ ಮೃತ ಬಿನ್ ಲಾಡೆನ್ ಫೋಟೊವಿದ್ದ ಕರಪತ್ರವೊಂದನ್ನು ಅಪರಿಚಿತರು, ಅಲ್ಲಿಯ ತನಿಖಾಧಿಕಾರಿಗೆ ಕಳುಹಿಸಿದ್ದರು. ಅದನ್ನು ಕಳುಹಿಸಿದವರು ಯಾರು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಆದರೆ ಅದರ ಮೇಲಿದ್ದ ಕೆಲವು ಬರಹಗಳು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯದ್ದಾಗಿರಬಹುದು ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದವು. ಅದಾದ ಬಳಿಕ ಕೊಲ್ಲಂ ಸ್ಫೋಟದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಮೈಸೂರು ಸ್ಫೋಟ ಸಂಭವಿಸಿದ್ದು, ಇದರ ಹೊಣೆಯನ್ನು ಇದುವರೆಗೂ ಯಾವುದೇ ಸಂಘಟನೆಯು ಹೊತ್ತುಕೊಂಡಿಲ್ಲ.
ಪ್ರಾಧಿಕಾರದಿಂದ ಮೆಮೊ ಸಲ್ಲಿಕೆ
ಪೊಲೀಸ್ ದೂರು ಪ್ರಾಧಿಕಾರ ನ್ಯಾಯಪೀಠಕ್ಕೆ ಸಲ್ಲಿಸಿರುವ ಜ್ಞಾಪನಾ ಪತ್ರದ (ಮೆಮೊ) ಪ್ರಮುಖ ಅಂಶಗಳು ಈ ರೀತಿ ಇವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ಪ್ರಾಧಿಕಾರವು ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಘಟನಾ ಸ್ಥಳವನ್ನು ಪರಿಶೀಲಿಸಲಾಗಿದೆ. ಪೊಲೀಸರಿಂದ ಲಾಠಿ ಏಟು ತಿಂದು ಗಾಯಗೊಂಡ ಪ್ರತಿ ವ್ಯಕ್ತಿಗೆ ಹಾಗೂ ಹಿಂಸೆಯ ಸ್ವರೂಪ ಆಧರಿಸಿ ₹ 25 ಸಾವಿರದಿಂದ ₹ 1ಲಕ್ಷದವರೆಗೆ ಪರಿಹಾರ ನೀಡಬೇಕು. ದೌರ್ಜನ್ಯ ನಿಯಂತ್ರಣಕ್ಕೆ ನಿರ್ಲಕ್ಷಿಸಿದ ಅಧಿಕಾರಿಗಳನ್ನು ಮತ್ತು ಅಮಾಯಕರನ್ನು ಥಳಿಸಿದ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.