ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿ ಮರಾಠಿ ಭಾಷಿಕರ ‘ಬೆಳಗಾವಿ ಅಭಿವೃದ್ಧಿ ವೇದಿಕೆ’ಯ ಪಾಲಾಯಿತು. ಮೇಯರ್ ಆಗಿ ಮಹೇಶ ಕೇಶವ ನಾಯಿಕ ಹಾಗೂ ಉಪ ಮೇಯರ್ ಆಗಿ ರೇಣು ಮುತಕೇಕರ ಆಯ್ಕೆಯಾದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲದ ಪಾಲಿಕೆಯ ಎಲ್ಲ ಸದಸ್ಯರು ‘ಬೆಳಗಾವಿ ಅಭಿವೃದ್ಧಿ ವೇದಿಕೆ’ ಎಂದು ಪ್ರತ್ಯೇಕ ಗುಂಪು ಕಟ್ಟಿಕೊಂಡು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಎದುರಿಸಿ ಅಧಿಕಾರದ ಗದ್ದುಗೆ ತಮ್ಮದಾಗಿಸಿಕೊಂಡರು. ಶಾಸಕರು ಹಾಗೂ ಸಂಸದರು ಈ ಚುನಾವಣೆ ಬಗ್ಗೆ ನಿರಾಸಕ್ತರಾಗಿದ್ದರಿಂದ ಕನ್ನಡ ಪರ ಸದಸ್ಯರು ಸೋಲು ಅನುಭವಿಸಬೇಕಾಯಿತು.
ಮೇಯರ್ ಸ್ಥಾನವು ಹಿಂದುಳಿದ ‘ಅ’ ವರ್ಗಕ್ಕೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಪಾಲಿಕೆಯ 58 ಮಂದಿ ಸದಸ್ಯರು, ನಾಲ್ವರು ಶಾಸಕರು, ಇಬ್ಬರು ಸಂಸದರು ಸೇರಿದಂತೆ ಒಟ್ಟು 64 ಮಂದಿ ಮತದಾನ ಚಲಾಯಿಸಬೇಕಿತ್ತು. ಆದರೆ, ಪಾಲಿಕೆ ಸದಸ್ಯರೂ ಆಗಿರುವ ಶಾಸಕ ಸಂಭಾಜಿ ಪಾಟೀಲ ಅವರಿಗೆ ಒಂದು ಮತ ಚಲಾಯಿಸಲು ಮಾತ್ರ ಅವಕಾಶವಿತ್ತು.
ಆದರೆ, ಅವರು ಮತಚಲಾಯಿಸದೇ ತಟಸ್ಥರಾಗಿ ಉಳಿದರು. ಶಾಸಕ ಫಿರೋಜ್ ಸೇಠ್ ಮಾತ್ರ ಚುನಾವಣೆಯಲ್ಲಿ ಭಾಗವಹಿಸಿದ್ದರು. ಶಾಸಕ ಸಂಜಯ ಪಾಟೀಲ, ಸಚಿವ ಸತೀಶ ಜಾರಕಿಹೊಳಿ, ಸಂಸದರಾದ ಸುರೇಶ ಅಂಗಡಿ, ರಮೇಶ ಕತ್ತಿ ಮತದಾನಕ್ಕೆ ಬರಲಿಲ್ಲ. ಒಟ್ಟು 59 ಮಂದಿ ಪೈಕಿ 58 ಮಂದಿ ಮತ ಚಲಾಯಿಸಿದರು.
ಮೇಯರ್ ಸ್ಥಾನಕ್ಕೆ 57 ಮಂದಿ ಮತ ಚಲಾಯಿಸಿದ್ದು, ಮಹೇಶ ನಾಯಿಕ ಅವರಿಗೆ 31 ಮತಗಳು ಹಾಗೂ ಫಯೀಂ ಇಕ್ಬಾಲ್ ನಾಯಿಕವಾಡಿ ಅವರಿಗೆ 26 ಮತಗಳು ಬಿದ್ದವು. ಪಾಲಿಕೆ ಸದಸ್ಯ ಸಂಜಯ ಸವ್ವಾಸೇರಿ ತಟಸ್ಥರಾಗಿ ಉಳಿದರು. ಉಪ ಮೇಯರ್ ಸ್ಥಾನಕ್ಕೆ 58 ಮಂದಿ ಮತ ಚಲಾಯಿಸಿದ್ದು, ರೇಣು ಮುತಕೇಕರ ಅವರಿಗೆ 31 ಹಾಗೂ ಶ್ರೀಯಲಾ ಜನಗೌಡ ಅವರಿಗೆ 27 ಮತಗಳು ಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.