ADVERTISEMENT

‘ಸಚಿವ, ಶಾಸಕರ ಮೌಲ್ಯಮಾಪನ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಸಚಿವರು ಮತ್ತು ಪಕ್ಷದ ಶಾಸಕರ ಸಾಧನೆ ಕುರಿತು ಮೂರು ತಿಂಗಳಿಗೊಮ್ಮೆ ಮೌಲ್ಯಮಾಪನ ನಡೆಸಿ ವರದಿ ನೀಡುವಂತೆ ಎಐಸಿಸಿ ನಿರ್ದೇಶನ ನೀಡಿದ್ದು, ಅ. 1ರಿಂದ ಮೌಲ್ಯಮಾಪನ ಪ್ರಕ್ರಿಯೆ ಆರಂಭ­ವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಂದ ಪ್ರತಿಕ್ರಿಯೆ ಪಡೆದು ಸಚಿವರು ಮತ್ತು ಶಾಸಕರ ಸಾಧನೆಗಳ ಮೌಲ್ಯಮಾಪನ ನಡೆಸು­ವಂತೆ ಎಐಸಿಸಿ ಸೂಚಿಸಿದೆ. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ­ಯಾ­ಗಿರುವ ಎಐಸಿಸಿ ಪ್ರಧಾನ ಕಾರ್ಯ­ದರ್ಶಿ­ಯನ್ನು ಒಳಗೊಂಡ ತಂಡ ಮೌಲ್ಯ­ಮಾಪನ ನಡೆಸಲಿದೆ ಎಂದರು.

‘ಮೌಲ್ಯಮಾಪನಕ್ಕೆ ಪ್ರಶ್ನಾವಳಿ ರಚಿಸುವ ಹೊಣೆಯನ್ನು ಎಐಸಿಸಿ ನನಗೆ ಒಪ್ಪಿಸಿದೆ.ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಬೋಧಕರು ಸೇರಿದಂತೆ ತಜ್ಞರ ಸಲಹೆ ಪಡೆದು ಪ್ರಶ್ನಾವಳಿ ರೂಪಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನದಲ್ಲಿ  ಪಾಲುದಾರಿಕೆ, ಪಕ್ಷದ ಚುನಾ­ವಣಾ ಪ್ರಣಾಳಿಕೆ ಅನುಷ್ಠಾನದಲ್ಲಿ ಬದ್ಧತೆ, ಸಾರ್ವಜನಿಕರ ಜೊತೆಗಿನ ಸಂಬಂಧ ಮತ್ತಿತರ ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುವುದು’ ಎಂದು ತಿಳಿಸಿದರು.

ಅ.1ರಿಂದ ಎಲ್ಲಾ ಜಿಲ್ಲಾ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ­ಗಳ ಸಭೆಗಳು ನಡೆಯಲಿವೆ. ಆ ಸಭೆಗಳಿಗೂ ಮುನ್ನವೇ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಿಗೆ ಪ್ರಶ್ನಾವಳಿಗಳನ್ನು ಕಳುಹಿಸ­ಲಾಗು­ವುದು. ಅವರಿಂದ ಪ್ರತಿಕ್ರಿಯೆ ಬಂದ ನಂತರ ಅದನ್ನು ಕ್ರೋಡೀಕರಿಸಿ ವರದಿ ಸಿದ್ಧಪಡಿಸಲಾಗುವುದು. ಎಐಸಿಸಿ
ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರತಿ ಮೂರು ತಿಂಗಳಿ­ಗೊಮ್ಮೆ ನಡೆಸುವ ಸಭೆಗೆ ಈ ವರದಿ ಸಲ್ಲಿಸಲಾಗುವುದು ಎಂದರು.

ಅಭ್ಯರ್ಥಿಗಳ ಆಯ್ಕೆಗೆ ಸಿದ್ಧತೆ: ಮುಂಬರುವ ಲೋಕಸಭಾ ಚುನಾ­ವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ ಎಂದು ಪರಮೇಶ್ವರ್‌ ತಿಳಿಸಿದರು.

ಕೆಪಿಸಿಸಿ ವತಿಯಿಂದ ನಿಯೋಜಿಸಿದ್ದ ವೀಕ್ಷಕರು ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಕುರಿತು ಗೋಪ್ಯ ವರದಿಯನ್ನು ಸಲ್ಲಿಸಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದರು.

ಎಐಸಿಸಿ ಕಡೆಯಿಂದಲೂ ಪ್ರತ್ಯೇಕ ವೀಕ್ಷಕರನ್ನು ನಿಯೋಜಿಸ­ಲಾಗಿದೆ. ಪಕ್ಷದಿಂದ ರಹಸ್ಯ ಸಮೀಕ್ಷೆಯನ್ನೂ ನಡೆಸಲಾಗು­ತ್ತಿದೆ. ಎಲ್ಲಾ ವರದಿಗಳನ್ನೂ ಪರಿಶೀಲಿಸಿದ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ. ಕೆಪಿಸಿಸಿ ಚುನಾವಣಾ ಸಮಿತಿ ನೀಡುವ ಶಿಫಾರಸುಗಳು ಹಾಗೂ ಎಐಸಿಸಿ ವೀಕ್ಷಕರ ವರದಿಗಳ ಕುರಿತು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ ಬಳಿಕ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ನಾಯಕತ್ವ, ಯುವ ಮುಖಂಡರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಎಐಸಿಸಿ ವರಿಷ್ಠರು ಸೂಚಿಸಿದ್ದಾರೆ. ಅದರ ಆಧಾರ­ದಲ್ಲೇ ವರದಿ ಪಡೆಯಲಾಗುತ್ತಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ  ಎಂದರು.

ಶೀಘ್ರದಲ್ಲಿ ಕ್ರಮ: ವಿಧಾನಸಭಾ ಚುನಾವಣೆ ವೇಳೆ ಪಕ್ಷ­ವಿರೋಧಿ ಚಟುವಟಿಕೆ ನಡೆಸಿದ ಆರೋಪ ಎದುರಿಸುತ್ತಿರುವ 450 ಮುಖಂಡರ ವಿರುದ್ಧ ಮಾಜಿ ಶಾಸಕ ಜೆ.ಅಲೆ­ಕ್ಸಾಂಡರ್‌ ನೇತೃತ್ವದ ಕೆಪಿಸಿಸಿ ಶಿಸ್ತುಪಾಲನಾ ಸಲಹಾ ಸಮಿತಿ ವಿಚಾರಣೆ ನಡೆಸುತ್ತಿದೆ. ಶೀಘ್ರದಲ್ಲಿ ಈ ಸಮಿತಿ ವರದಿ ಸಲ್ಲಿಸಲಿದೆ. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸ­ಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT