ಬೆಂಗಳೂರು: ‘ರಾಜಕಾರಣಿಯೊಬ್ಬರ ಹತ್ತಿರ ನೀನು ನನಗೆ ₹15 ಕೋಟಿ ಕೊಡಿಸಿದರೆ ನಾನು ಮಾಫಿ ಸಾಕ್ಷಿ ಆಗುತ್ತೇನೆ. ವಿನಯ ಕುಲಕರ್ಣಿಯ ರಾಜಕೀಯ ಭವಿಷ್ಯ ಮುಗಿಸಿ ಅವರನ್ನು ಕೊಲೆ ಕೇಸಿನಲ್ಲಿ ಸಿಕ್ಕಿ ಹಾಕಿಸುತ್ತೇನೆ. ಹೀಗೆಂದು ಬಸವರಾಜ ಮುತ್ತಗಿ ಉದ್ಯಮಿ ಐಶ್ವರ್ಯಾ ಗೌಡ ಅವರಿಗೆ ಮಾತು ಕೊಟ್ಟಿದ್ದಾರೆ...’
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಲಾದ ಅರ್ಜಿ ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಿರಿಯ ವಕೀಲರು ಮಂಡಿಸಿದ ವಾದಾಂಶವಿದು.
ಈ ಕುರಿತಂತೆ ವಿನಯ ಕುಲಕರ್ಣಿ, ದಿನೇಶ್, ಅಶ್ವತ್ಥ್ ಮತ್ತಿತರ ಆರೋಪಿಗಳು ಸಲ್ಲಿಸಿರುವ ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ವಾದ ಮಂಡಿಸಿದ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್, ‘ನೀನು ನನಗೆ ರಾಜಕಾರಣಿಯೊಬ್ಬರ ಹತ್ತಿರ ₹15 ಕೋಟಿ ಕೊಡಿಸು. ಅವರಿಗೂ ಅನುಕೂಲ ಆಗುವಂತೆ ಮಾಫಿ ಸಾಕ್ಷಿಯಾಗಿ ವಿನಯ ಕುಲಕರ್ಣಿ ಅವರನ್ನು ಕೇಸಿನಲ್ಲಿ ಸಿಕ್ಕಿ ಹಾಕಿಸುತ್ತೇನೆ ಎಂದು ಬಸವರಾಜ ಮುತ್ತಗಿಯು, ಐಶ್ವರ್ಯಾ ಗೌಡ ಜೊತೆಗೆ ನಡೆಸಿರುವ ಮಾತುಕತೆಯ ಪೆನ್ ಡ್ರೈವ್ ನಮ್ಮ ಬಳಿ ಇದೆ’ ಎಂದು ಅದನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದನ್ನು ಅಲ್ಲಗಳೆದ ಮುತ್ತಗಿ ಪರ ವಕೀಲ ನಾಗೇಂದ್ರ ನಾಯಕ್, ‘ಉದ್ಯಮಿ ಐಶ್ವರ್ಯ ಗೌಡ ಅವರು ವಿನಯ ಕುಲಕರ್ಣಿಗೆ ₹40 ಕೋಟಿ ಕೊಡಬೇಕು. ಅದನ್ನು ವಸೂಲಿ ಮಾಡುವ ಕೆಲಸವನ್ನು ಬಸವರಾಜ ಮುತ್ತಗಿಗೆ ವಹಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಮಾತುಕತೆ ಆಗಿದೆಯೇ ಹೊರತು, ಮಾಫಿ ಸಾಕ್ಷಿ ಸಂಬಂಧ ಇಲ್ಲ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ಪೆನ್ ಡ್ರೈವ್ ಕೂಡ ಇದೆ’ ಎಂದು ಪ್ರತಿಪಾದಿಸಿದರು.
ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಆರೋಪಿಗಳ ಪರ ಪದಾಂಕಿತ ಹಿರಿಯ ವಕೀಲರಾದ ಸಂದೇಶ್ ಜೆ.ಚೌಟ, ಎಂ.ಎಸ್.ಶ್ಯಾಮ್‌ಸುಂದರ್, ವಿನಯ ಕುಲಕರ್ಣಿ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ಮತ್ತು ದಿನೇಶ್ ಹಾಗೂ ಅಶ್ವತ್ಥ್ ಪರ ಜಿ.ಲಕ್ಷ್ಮಿಕಾಂತ ಇದ್ದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.