ADVERTISEMENT

ಸಿದ್ದರಾಮಯ್ಯರದ್ದು ಸುಳ್ಳು ಆರೋಪ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 16:05 IST
Last Updated 14 ಜೂನ್ 2025, 16:05 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ ₹1 ಲಕ್ಷ ಕೋಟಿ ಸಿಗಲಿದೆ. ಆದರೆ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರದ ತೆರಿಗೆ ಆದಾಯದಲ್ಲಿ ಶೇ 50ರಷ್ಟನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ, ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯದಲ್ಲಿ ಶೇ 32ರಷ್ಟು ಮಾತ್ರ ರಾಜ್ಯಗಳಿಗೆ ಹಂಚಿಕೆಯಾಗುತ್ತಿತ್ತು. ಮೋದಿ ಅವರು ರಾಜ್ಯಗಳ ಪಾಲನ್ನು ಶೇ 41ಕ್ಕೆ ಹೆಚ್ಚಿಸಿದರು. ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಹೀಗಿದ್ದೂ, ಅದನ್ನು ಮರೆಮಾಚುತ್ತಾರೆ’ ಎಂದರು.

‘14ನೇ ಹಣಕಾಸು ಆಯೋಗದ ಸಭೆ ನಡೆದಾಗ ಕಾಂಗ್ರೆಸ್‌ ಸಚಿವರು ಭಾಗಿಯಾಗಿದ್ದರು. 15ನೇ ಹಣಕಾಸು ಆಯೋಗದ ಸಭೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರದ್ದೇ ಸರ್ಕಾರವಿತ್ತು. ಆ ಸಭೆಯಲ್ಲಿ ವಸ್ತುಸ್ಥಿತಿಯನ್ನು ಸರಿಯಾಗಿ ಮಂಡಿಸಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಿದ್ದ ಅನುದಾನಕ್ಕಿಂತ ಹೆಚ್ಚಿನ ಅನುದಾನವನ್ನು ಎನ್‌ಡಿಎ ಸರ್ಕಾರ ನೀಡುತ್ತಿದೆ’ ಎಂದರು.

ADVERTISEMENT

‘ಯುಪಿಎ–2 ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರವು ₹700 ಕೋಟಿಯಷ್ಟೇ ನೀಡಿತ್ತು. ಮೋದಿ ಅವರ ಸರ್ಕಾರವು ರಾಜ್ಯದ ರೈಲ್ವೆ ಯೋಜನೆಗಳಿಗೆ ₹7,700 ಕೋಟಿ ಕೊಟ್ಟಿದೆ. ಅದಕ್ಕೆ ಸರಿಸಮನಾದ ಹಣವನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೆದ್ದಾರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಕ್ಷೇತ್ರಗಳಿಗೆ ಕೇಂದ್ರವು ದೊಡ್ಡಮಟ್ಟದ ಅನುದಾನ ಒದಗಿಸುತ್ತಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಮಾತೇ ಆಡುವುದಿಲ್ಲ’ ಎಂದರು.

ಜಾತಿ ಸಮೀಕ್ಷೆ ವಿಚಾರದಲ್ಲಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದರು. ಹೊಸದಾಗಿ ಸಮೀಕ್ಷೆ ನಡೆಸಿ ಎಂದು ಹೇಳುವ ಮೂಲಕ ಅವರನ್ನು ಅವರ ಹೈಕಮಾಂಡ್‌ ರಕ್ಷಿಸಿದೆ.
– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.