ADVERTISEMENT

22 ಕಳಂಕಿತರಿಗೂ ಮರು ಆಯ್ಕೆ ಭಾಗ್ಯ

ಕೆಪಿಎಸ್‌ಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಅಭ್ಯರ್ಥಿಗಳಿಗೆ 180–189ರವರೆಗೆ ಅಂಕ

ವೈ.ಗ.ಜಗದೀಶ್‌
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
22 ಕಳಂಕಿತರಿಗೂ ಮರು ಆಯ್ಕೆ ಭಾಗ್ಯ
22 ಕಳಂಕಿತರಿಗೂ ಮರು ಆಯ್ಕೆ ಭಾಗ್ಯ   

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪ್ರಕಟಿಸಿದ 2014ರ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯಲ್ಲಿ ಕಳಂಕಿತ ಅಭ್ಯರ್ಥಿಗಳು ಅವಕಾಶ ದಕ್ಕಿಸಿಕೊಂಡಿರುವುದು  ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ.

2011ರ ಸಾಲಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳ ತನಿಖೆ ನಡೆಸಿದ್ದ  ಸಿಐಡಿ, ಒಟ್ಟು 46 ಅಭ್ಯರ್ಥಿಗಳು ಕಳಂಕಿತರು ಎಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪೈಕಿ 22 ಮಂದಿ  2014ನೇ ಸಾಲಿನಲ್ಲಿ ಪುನರಾಯ್ಕೆಯಾಗಿದ್ದಾರೆ.  ಅದರಲ್ಲೂ 15 ಅಭ್ಯರ್ಥಿಗಳು ಉಪವಿಭಾಗಾಧಿಕಾರಿ (ಕಂದಾಯ) ಮತ್ತು ಡಿವೈಎಸ್‌ಪಿ (ಪೊಲೀಸ್‌) ಹುದ್ದೆ ಪಡೆದಿದ್ದಾರೆ.

‘ಸಿಐಡಿ ಹಾಗೂ  ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಸಲ್ಲಿಸಿದ್ದ ವರದಿಯಲ್ಲಿ ಕಳಂಕಿತರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡುವಂತೆ ಹೇಳಲಾಗಿತ್ತು. ಬದಲಿಗೆ,  ಆಯಕಟ್ಟಿನ ಹುದ್ದೆ ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು  2014ರ ಸಾಲಿನಲ್ಲಿ ಅವಕಾಶ ವಂಚಿತ ಅಭ್ಯರ್ಥಿಗಳು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ADVERTISEMENT

ಕಳಂಕಿತರಿಗೂ ಭಾಗ್ಯ: 2011ರ ನೇಮಕಾತಿ ಪ್ರಕ್ರಿಯೆ ವೇಳೆ  ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿದ್ದ ಗೋನಾಳ್‌ ಭೀಮಪ್ಪ ಅವರ ಏಜೆಂಟ್‌ ಅಮರನಾಥ್‌, ಸದಸ್ಯೆ ಮಂಗಳಾ ಶ್ರೀಧರ್, ಮಾಜಿ ಸದಸ್ಯರಾದ ಎಚ್‌.ಡಿ. ಪಾಟೀಲ, ಪಾರ್ಶ್ವನಾಥ್ ಹಾಗೂ ಅವರ ಆಪ್ತರು ಹಾಗೂ ಏಜೆಂಟರನ್ನು ಬಳಸಿಕೊಂಡು 46 ಮಂದಿ ಆಯಕಟ್ಟಿನ ಹುದ್ದೆ ಗಿಟ್ಟಿಸಿದ್ದಾರೆ ಎಂದು ಸಿಐಡಿ ವರದಿ ಹೇಳಿತ್ತು.

ಆ ಪಟ್ಟಿಯಲ್ಲಿದ್ದವರ ಪೈಕಿ ಬಲರಾಮ್‌ ಲಮಾಣಿ, ಎ.ಆರ್‌. ಸೂರಜ್, ಜಿ.ಆರ್‌. ನಟರಾಜ್, ವಿ.ಸೋಮಶೇಖರ, ಎಂ.ಗಂಗಪ್ಪ ಮತ್ತೆ ಉಪವಿಭಾಗಾಧಿಕಾರಿ ಹುದ್ದೆ ಗಿಟ್ಟಿಸಿದ್ದಾರೆ. ಎ.ಆರ್‌. ಸುಮೀತ್‌, ಪ್ರಿಯದರ್ಶಿನಿ ಸನಿಕೊಪ್ ಡಿವೈಎಸ್‌ಪಿ ಹುದ್ದೆಯನ್ನು ಮರಳಿ ಪಡೆದಿದ್ದಾರೆ.

ಹಿಂದೆ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಪಡೆದಿದ್ದ ಅಭಿಷೇಕ್ ಹೆಗ್ಡೆ, ಪಿ.ಎಂ. ಚಿದಂಬರ ಈ ಬಾರಿ ವಾಣಿಜ್ಯ ತೆರಿಗೆ ಇಲಾಖೆ ಉಪವಿಭಾಗಾಧಿಕಾರಿ ಹುದ್ದೆಗೆ ನೇಮಕವಾಗಿದ್ದಾರೆ.

ಗೌರವ ಕುಮಾರ್‌ ಶೆಟ್ಟಿಗೆ ಈ ಬಾರಿ ಉಪವಿಭಾಗಾಧಿಕಾರಿ ಹುದ್ದೆ ಕೈತಪ್ಪಿದ್ದು,  ಆಹಾರ ಮತ್ತು ನಾಗರಿಕ ಇಲಾಖೆ ಸಿಕ್ಕಿದೆ. ಗೋವರ್ಧನ್‌ ಗೋಪಾಲ್‌ ಹಾಗೂ ಎಂ.ಎನ್. ನವೀನ್‌ ಆಯಕಟ್ಟಿನ ಹುದ್ದೆ ಕಳೆದುಕೊಂಡಿದ್ದಾರೆ. ಆದರೆ, ಕಳಂಕಿತರ ಪಟ್ಟಿಯಲ್ಲಿದ್ದ ಬಹುತೇಕರಿಗೆ ಉತ್ತಮ ಹುದ್ದೆ ಲಭಿಸಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದೂ ದೂರಿನಲ್ಲಿ ವಿವರಿಸಲಾಗಿದೆ.

ಸಂದರ್ಶಕರೂ ಅವರೇ: 2011ರ ಸಾಲಿನಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿದ್ದ ಎಚ್.ಡಿ. ಪಾಟೀಲ, ದಯಾಶಂಕರ್‌ ಹಾಗೂ ಅಮಾನತು ರದ್ದು ಪಡಿಸಿದ್ದರಿಂದ ಕೆಪಿಎಸ್‌ಸಿ ಸದಸ್ಯ ಸ್ಥಾನಕ್ಕೆ ಮರಳಿ ಬಂದಿರುವ ಮಂಗಳಾ ಶ್ರೀಧರ್‌ ಅವರೇ ಈ ಬಾರಿಯೂ ಸಂದರ್ಶನ ನಡೆಸಿದ್ದಾರೆ.   ಹೀಗಾಗಿ, ಕಳಂಕಿತರಿಗೆ ಆಯಕಟ್ಟಿನ ಹುದ್ದೆ ಮತ್ತೆ ದಕ್ಕಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಂದೇಹಕ್ಕೆ ಕಾರಣವಾದ 189 ಅಂಕ: 200 ಅಂಕಗಳವರೆಗೆ  ವ್ಯಕ್ತಿತ್ವ ಪರೀಕ್ಷೆಯಲ್ಲಿ (ಮೌಖಿಕ ಸಂದರ್ಶನ) ಅಂಕ ನೀಡುವ ಅವಕಾಶ ಇದೆ. ಆದರೆ, ಕನಿಷ್ಠ 50ರಿಂದ ಗರಿಷ್ಠ 150ರವರೆಗೆ ಅಂಕ ನೀಡಲಾಗುತ್ತಿತ್ತು. ಗರಿಷ್ಠ ಅಂಕವನ್ನು 100ಕ್ಕೆ ಇಳಿಸಿದರೆ ಭ್ರಷ್ಟಾಚಾರ ತಡೆಯಲು ಸಾಧ್ಯ ಎಂದು ಪಿ.ಸಿ. ಹೋಟಾ ಸಮಿತಿ ಶಿಫಾರಸು ಮಾಡಿತ್ತು.

ಕೆಪಿಎಸ್‌ಸಿ ಇತಿಹಾಸದಲ್ಲೇ ಮೊದಲ ಬಾರಿಗೆ 180–189ರವರೆಗೆ ಅಂಕವನ್ನು ಈ ಬಾರಿ ನೀಡಲಾಗಿದೆ. ತಮಗೆ ಬೇಕಾದ ಅಭ್ಯರ್ಥಿಗಳಿಗೆ ಹೆಚ್ಚು ಅಂಕವನ್ನು ನೀಡಿ, ಆಯ್ಕೆ ಮಾಡಿಕೊಳ್ಳಲು ಸದಸ್ಯರು ಇದನ್ನು ಬಳಸಿಕೊಂಡಿದ್ದಾರೆ ಎಂದು ಅವಕಾಶ ವಂಚಿತರು ಆಪಾದಿಸಿದ್ದಾರೆ.

***

ನಿರ್ಬಂಧ ಅಸಾಧ್ಯ: ಪ್ರಸನ್ನಕುಮಾರ್‌
2011ನೇ ಸಾಲಿನ ನೇಮಕಾತಿ ವಿಷಯ ಸದ್ಯ ಕೋರ್ಟ್‌ ಮುಂದಿದೆ. ಹಾಗಾಗಿ 2014ರ ನೇಮಕಾತಿ ಯಲ್ಲಿಯೂ ಆ ಸಾಲಿನವರಿಗೆ ಅವಕಾಶ ನೀಡಲಾಗಿದೆ. ಯಾರಿಗೂ ಅವಕಾಶ ನಿರಾಕರಿಸಲು ಸಾಧ್ಯವಿಲ್ಲ. 2011ರಲ್ಲಿ ಆಯ್ಕೆಯಾದವರ ಪೈಕಿ 93 ಅಭ್ಯರ್ಥಿಗಳು ಮರು ಆಯ್ಕೆಯಾಗಿದ್ದಾರೆ. 15 ಜನ ಮತ್ತೆ ಉನ್ನತ ಹುದ್ದೆ ಪಡೆದಿದ್ದಾರೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಎನ್.ಎಸ್. ಪ್ರಸನ್ನಕುಮಾರ್‌ ಹೇಳಿದರು.

ಸದಸ್ಯರ ಅಮಾನತು ಆದೇಶವನ್ನು ಕೋರ್ಟ್ ರದ್ದುಪಡಿಸಿದ್ದರಿಂದ ಅವರು ಸಂದರ್ಶನ ನಡೆಸಿದ್ದಾರೆ. ಸದಸ್ಯರ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿರುವುದರಿಂದ ಅವರನ್ನು ನಿರ್ಬಂಧಿಸುವ ಅಧಿಕಾರ ಆಯೋಗಕ್ಕೆ ಇಲ್ಲ ಎಂದೂ ಅವರು ಹೇಳಿದರು.

***

ಒಂದೇ ಕುಟುಂಬದ ನಾಲ್ವರು ಮರು ಆಯ್ಕೆ
2011ರ ಸಾಲಿನ ನೇಮಕಾತಿಯಲ್ಲಿ ‘ತಾಳಿಭಾಗ್ಯ’ ಯೋಜನೆಯ ಸೌಲಭ್ಯ ಪಡೆದಿದ್ದಾರೆ ಎಂಬ ಟೀಕೆಗೆ ಗುರಿಯಾಗಿದ್ದ  ಒಂದೇ ಕುಟುಂಬದವರು ಈ ಬಾರಿಯೂ ಆಯ್ಕೆಯಾಗಿದ್ದಾರೆ. 

ಎ.ಆರ್‌. ಸೂರಜ್(ಎ.ಸಿ) ಎ.ಆರ್‌. ಸುಮೀತ್‌ (ಡಿವೈಎಸ್‌ಪಿ), ಭಾವನಾ ಭಟ್‌ (ತಹಶೀಲ್ದಾರ್‌) ವಂದನಾ ಭಟ್‌ (ತಹಸೀಲ್ದಾರ್‌) ಈ ಪಟ್ಟಿಯಲ್ಲಿದ್ದಾರೆ. ಇವರ ಹೆಸರು ಕಳಂಕಿತರ ಪಟ್ಟಿಯಲ್ಲಿಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.