ADVERTISEMENT

35 ಹೊಸ ಮೆಟ್ರಿಕ್ ನಂತರದ ಹಾಸ್ಟೆಲ್ ಆರಂಭ

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಗೆ ಮಂಜೂರು

ಮನೋಜ ಕುಮಾರ್ ಗುದ್ದಿ
Published 8 ಜೂನ್ 2022, 19:30 IST
Last Updated 8 ಜೂನ್ 2022, 19:30 IST
ಅಲ್ಲಾಬಕಷ್
ಅಲ್ಲಾಬಕಷ್   

ಕಲಬುರಗಿ: ಬಜೆಟ್‌ನಲ್ಲಿ ಘೋಷಿಸಿದಂತೆ ಸಮಾಜ ಕಲ್ಯಾಣ ಇಲಾಖೆ ರಾಜ್ಯದ 22 ಜಿಲ್ಲೆಗಳಲ್ಲಿ 35 ನೂತನ ಹಾಸ್ಟೆಲ್‌ಗಳನ್ನು ಆರಂಭಿಸಲಿದ್ದು, ಈ ಸಂಬಂಧ ಇಲಾಖೆ ಸರ್ಕಾರಿ ಆದೇಶ ಹೊರಡಿಸಿದೆ.

ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮೆಟ್ರಿಕ್ ನಂತರದ ತಲಾ 100 ಜನ ಸಾಮರ್ಥ್ಯದ ಐದು ಬಾಲಕರ ಹಾಸ್ಟೆಲ್ ಮತ್ತು ಯಾದಗಿರಿ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಾಲ್ಕು ಬಾಲಕಿಯರ ಹಾಸ್ಟೆಲ್ ಆರಂಭಿಸಲು ತೀರ್ಮಾನಿಸಲಾಗಿದೆ.

ಸದ್ಯಕ್ಕೆ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರತಿ ಹಾಸ್ಟೆಲ್‌ಗೆ ಒಬ್ಬರಂತೆ 35 ವಾರ್ಡನ್‌ಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ನೇಮಸಿಕೊಳ್ಳಲು
ಸೂಚಿಸಲಾಗಿದೆ.

ADVERTISEMENT

ಪ್ರತಿ ಹಾಸ್ಟೆಲ್‌ಗೆ ಮೂವರು ಅಡುಗೆಯವರು, ಇಬ್ಬರು ಅಡುಗೆ ಸಹಾಯಕರು ಮತ್ತು ಬಾಲಕಿಯರ ಹಾಸ್ಟೆಲ್‌ಗಳಿಗೆ ತಲಾ ಒಬ್ಬರು ರಾತ್ರಿ ಕಾವಲುಗಾರರು ಸೇರಿ ಒಟ್ಟು 230 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

ಕಲಬುರಗಿಯಲ್ಲಿ 104 ಹಾಸ್ಟೆಲ್: ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಕಲಬುರಗಿ ಜಿಲ್ಲೆಯಲ್ಲಿ 104 ಹಾಸ್ಟೆಲ್‌ಗಳಿವೆ. ಹೊಸದಾಗಿ ತಲಾ ಒಂದು ಬಾಲಕರ ಹಾಗೂ ಬಾಲಕಿಯರ ಹಾಸ್ಟೆಲ್‌ ಆರಂಭವಾಗಲಿದ್ದು, ಪ್ರವೇಶ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ.

ಕಲಬುರಗಿಯು ವಿಭಾಗೀಯ ಕೇಂದ್ರವಾಗಿದ್ದು, ಇಲ್ಲಿ ಅಧ್ಯಯನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಗುಲಬರ್ಗಾ ವಿಶ್ವವಿದ್ಯಾಲಯ, ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಪಿಯು ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ಹಾಸ್ಟೆಲ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸುತ್ತಾರೆ.

‘ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರವೇಶ ನೀಡಬೇಕು ಎಂಬ ನಿಯಮವಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ಮತ್ತು ಮೂಲಸೌಲಭ್ಯ ಒದಗಿಸಲು ಕಷ್ಟವಾಗುತ್ತದೆ.

ಪ್ರಸಕ್ತ ವರ್ಷ ಬಾಲಕರು ಮತ್ತು ಬಾಲಕಿಯರಿಗೆ ಒಂದೊಂದು ಹಾಸ್ಟೆಲ್‌ ಮಂಜೂರು ಮಾಡಬೇಕು’ ಎಂದು ಕೋರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಕಳೆದ ಬಾರಿ 104 ಹಾಸ್ಟೆಲ್‌ಗಳ ಸಾಮರ್ಥ್ಯ ಮೀರಿ ಹೆಚ್ಚುವರಿಯಾಗಿ 1773 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ರಾಜಾಪುರದ ಹಾಸ್ಟೆಲ್ ನಿರ್ಮಾಣ ಮುಕ್ತಾಯದ ಹಂತದಲ್ಲಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವ ಸಾಧ್ಯತೆ ಇದೆ.

‘ಜಿಲ್ಲೆಗೆ ಬೇಕು ಇನ್ನೂ 44 ಹಾಸ್ಟೆಲ್’

‌ಜಿಲ್ಲೆಯಲ್ಲಿ ಬಿಸಿಎಂ ಇಲಾಖೆಯ 128, ಸಮಾಜ ಕಲ್ಯಾಣ ಇಲಾಖೆಯ 104 ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 45 ಹಾಸ್ಟೆಲ್ ಸೇರಿ 277 ಹಾಸ್ಟೆಲ್‌ಗಳಿವೆ.

‘ಹೊಸದಾಗಿ ಬಿಸಿಎಂ ಇಲಾಖೆಗೆ 24, ಸಮಾಜ ಕಲ್ಯಾಣ ಇಲಾಖೆಗೆ 6 ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 14 ಹಾಸ್ಟೆಲ್‌ ಅಗತ್ಯವಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯವು ತಲಾ 500 ಸಾಮರ್ಥ್ಯದ ಎರಡು ಹೊಸ ಹಾಸ್ಟೆಲ್‌ ನಿರ್ಮಿಸಲು ಉದ್ದೇಶಿಸಿದ್ದು, ಅಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಸಿಗಲಿದೆ.

***

ಕಲಬುರಗಿಯಲ್ಲಿ ಹಾಸ್ಟೆಲ್‌ಗೆ ಹೆಚ್ಚು ಬೇಡಿಕೆ ಇರುವ ಕಾರಣ ಹೆಚ್ಚುವರಿ ಹಾಸ್ಟೆಲ್‌ ಮಂಜೂರಾತಿಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಅದರಂತೆ ತಲಾ 100 ಸಾಮರ್ಥ್ಯದ 2 ಹಾಸ್ಟೆಲ್ ಮಂಜೂರು ಮಾಡಿದೆ

-ಎಂ. ಅಲ್ಲಾಬಕಷ್, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.