ADVERTISEMENT

4 ವಾರದೊಳಗೆ ಸಮಗ್ರ ಮಾಹಿತಿ ನೀಡಿ

ಅರಣ್ಯ ಹಕ್ಕು ಕಾಯ್ದೆಯ ತಿರಸ್ಕೃತ ಅರ್ಜಿ * ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

ಬೆಂಗಳೂರು: ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾಗಿದ್ದ ಅರ್ಜಿಗಳು ತಿರಸ್ಕೃತಗೊಂಡ ಪ್ರಕರಣಗಳಲ್ಲಿ ಜಾಗವನ್ನು ವಶಪಡಿಸಿಕೊಳ್ಳಲು ಕೈಗೊಂಡಿರುವ ಕ್ರಮಗಳ ಸಮಗ್ರ ಮಾಹಿತಿ ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಅರ್ಜಿಗಳು ತಿರಸ್ಕೃತಗೊಂಡ ಬಳಿಕವೂ ಅರಣ್ಯ ಇಲಾಖೆ ಜಾಗವನ್ನು ವಶಕ್ಕೆ ಪಡೆಯದಿರುವುದನ್ನು ಪ್ರಶ್ನಿಸಿ ನಗರದ ವೈಲ್ಡ್‌ಲೈಫ್‌ ಫರ್ಸ್ಟ್‌, ಅಮರಾವತಿಯ ನೇಚರ್‌ ಕನ್ಸರ್ವೇಷನ್‌ ಫೌಂಡೇಷನ್‌ ಹಾಗೂ ನಾಗಪುರದ ಟೈಗರ್‌ ರಿಸರ್ಚ್‌ ಆ್ಯಂಡ್‌ ಕನ್ಸರ್ವೇಷನ್‌ ಟ್ರಸ್ಟ್‌ಗಳು (ಟ್ರ್ಯಾಕ್ಟ್‌) ರಿಟ್‌ ಅರ್ಜಿ ಸಲ್ಲಿಸಿದ್ದವು.

ಈ ಕುರಿತು 2017 ಡಿಸೆಂಬರ್‌ 12ರವರೆಗಿನ ಸಂಪೂರ್ಣ ಮಾಹಿತಿಯನ್ನು ನಾಲ್ಕು ವಾರಗಳ ಒಳಗೆ ಸಲ್ಲಿಸುವಂತೆ ಸೂಚಿಸಿ ಇದೇ 7ರಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಪ್ರಕರಣ ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ಮುಂದೂಡಿದೆ.

ADVERTISEMENT

ಅರಣ್ಯ ಹಕ್ಕು ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ ಸಲ್ಲಿಕೆಯಾಗಿದ್ದ 44 ಲಕ್ಷ ಅರ್ಜಿಗಳ ಪೈಕಿ 20 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಈ ಸಂಘಟನೆಗಳ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದಿದ್ದರು. ಅರ್ಜಿಗಳ ವಿಲೇವಾರಿ ವೇಳೆ ಕಾಯ್ದೆಯಲ್ಲಿರುವ ಅಂಶಗಳನ್ನು ಉಲ್ಲಂಘನೆ ಆಗಿರುವ ಬಗ್ಗೆಯೂ ವಿವರಿಸಿದ್ದರು. ಅರ್ಜಿ ಸಲ್ಲಿಕೆಗೆ 2005ರ ಗಡುವು ನಿಗದಿಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಕಾಡಿನಲ್ಲಿ ಜನವಸತಿ ಇರದ ಕಡೆಯೂ ಸುಳ್ಳು ದಾಖಲೆ ಒದಗಿಸಿ ಅರ್ಜಿ ಸಲ್ಲಿಸಿರುವ ಕುರಿತು ಹಾಗೂ ಗಡುವಿನ ನಂತರ ಅರಣ್ಯ ಒತ್ತುವರಿ ಹೇಗೆ ಹೆಚ್ಚಾಯಿತು ಎಂಬ ವಿವರಗಳನ್ನೂ ನೀಡಿದ್ದರು. ಈ ಕುರಿತು ಉಪಗ್ರಹ ದೃಶ್ಯಗಳನ್ನು ಆಧರಿಸಿ ನಡೆಸಿರುವ ಅಧ್ಯಯನದ ದಾಖಲೆಗಳನ್ನು ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲರು ಅರಣ್ಯ ಹಕ್ಕು ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನೇ ಪ್ರಶ್ನೆ ಮಾಡಿದ್ದರು.

ಕಾಡಿಗೆ ಸಂಬಂಧಿಸಿದ 50 ಲಕ್ಷ ಹೆಕ್ಟೇರ್‌ಗಳಿಗೂ ಅಧಿಕ ಭೂಮಿಯನ್ನು ಈ ಕಾಯ್ದೆಯಡಿ ಮಂಜೂರು ಮಾಡಲಾಗಿದೆ. ಪ್ರಮುಖ ವನ್ಯಜೀವಿ ಆವಾಸಸ್ಥಾನಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕೆಂದು ಕಾಯ್ದೆ ಹೇಳುತ್ತದೆ. ಇದು ಜಾರಿಯಾಗಿ 10 ವರ್ಷಗಳ ಬಳಿಕವೂ  ಒಂದು ಹೆಕ್ಟೇರ್‌ನಷ್ಟೂ ಭೂಮಿಯನ್ನು ಅಧಿಸೂಚಿತ ಪ್ರದೇಶ ಎಂದು ಘೋಷಿಸಿಲ್ಲ ಎಂದು ‘ವೈಲ್ಡ್‌ಲೈಫ್‌ ಫರ್ಸ್ಟ್‌’ನ ಟ್ರಸ್ಟಿ ಪ್ರವೀಣ್‌ ಭಾರ್ಗವ್‌ ತಿಳಿಸಿದರು.

ಅನರ್ಹ ವ್ಯಕ್ತಿಗಳಿಗೂ ಕಾಡಿನ ಜಾಗ ಮಂಜೂರು ಮಾಡಲಾಗುತ್ತಿದೆ. ಇದನ್ನು ತಡೆಯದಿದ್ದರೆ ಅರಣ್ಯ ಪ್ರದೇಶಗಳಿಗೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗಲಿದೆ. ವನ್ಯಜೀವಿಗಳ ಆವಾಸಸ್ಥಾನಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಮಾಣಪತ್ರದಲ್ಲಿ ಏನೇನಿರಬೇಕು?

* 2006ರ ಅರಣ್ಯ ಹಕ್ಕು ಕಾಯ್ದೆಯನ್ವಯ ಜಾಗ ಮಂಜೂರು ಮಾಡುವಂತೆ ಕೋರಿ ಪರಿಶಿಷ್ಟ ಪಂಗಡಗಳ ಹಾಗೂ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಂದ (ಒಟಿಎಫ್‌ಡಿ) ಬಂದಿರುವ ಅರ್ಜಿಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಒದಗಿಸಬೇಕು.

* ಪ್ರತಿ ವರ್ಗದಲ್ಲಿ ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಇದರಿಂದ ಎಷ್ಟು ಪ್ರಮಾಣದ ಜಮೀನು ಸರ್ಕಾರಕ್ಕೆ ಲಭ್ಯವಾಗುತ್ತದೆ ಎಂದು  ತಿಳಿಸಬೇಕು.

* ಅರ್ಜಿ ತಿರಸ್ಕರಿಸಿದ ಬಳಿಕ ಅರ್ಜಿದಾರರ ವಶದಲ್ಲಿರುವ ಭೂಮಿಯ ಸ್ವಾಧೀನ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು

* ತಿರಸ್ಕೃತ ಅರ್ಜಿಗಳಿಗೆ ಸಂಬಂಧಿಸಿ ಎಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಇನ್ನು ಎಷ್ಟು  ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂಬ ವಿವರ ಒದಗಿಸಬೇಕು

**

ಅರಣ್ಯ ಹಕ್ಕು ಕಾಯ್ದೆ ದುರ್ಬಳಕೆ ಮಾಡಿಕೊಂಡು ರಾಷ್ಟ್ರೀಯ ಉದ್ಯಾನ ರಕ್ಷಿತಾರಣ್ಯಗಳ ಜಾಗವನ್ನೂ ಕಬಳಕೆ ಮಾಡುತ್ತಿದ್ದ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ
– ಪ್ರವೀಣ್‌ ಭಾರ್ಗವ್‌, ‘ವೈಲ್ಡ್‌ಲೈಫ್‌ ಫರ್ಸ್ಟ್‌’ನ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.