ADVERTISEMENT

4684 ಬಸ್‌ ಖರೀದಿ: ಕೇಂದ್ರಕ್ಕೆ ಪ್ರಸ್ತಾವನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬಿಎಂಟಿಸಿ ಸೇರಿದಂತೆ ರಾಜ್ಯದ ಇತರ ಸಾರಿಗೆ ಸಂಸ್ಥೆಗಳಿಗೆ ಜವಾಹರಲಾಲ್‌ ನೆಹರು ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆ (ಜೆನರ್ಮ್) ಅಡಿಯಲ್ಲಿ 4684 ಬಸ್‌ಗಳನ್ನು ಹೊಸದಾಗಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧ ಮುಂಭಾಗ  ಸೋಮ ವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆರಂಭಿಸಿದ ‘ಬಿಗ್‌–ಟ್ರಂಕ್‌’ ಬಸ್‌ ಸೇವೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸ ಬಸ್‌ಗಳ ಖರೀದಿಗೆ ರೂ.2067 ಕೋಟಿ ಅಗತ್ಯವಿದೆ. ಜತೆಗೆ ವರ್ಕ್‌­ಶಾಪ್‌, ಬಸ್‌ ನಿಲ್ದಾಣ ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲು ಅಂದಾಜು ರೂ.850 ಕೋಟಿ ಬೇಕಾಗುತ್ತಿದೆ. ಒಟ್ಟು ರೂ.2991 ಕೋಟಿ ಮೊತ್ತದ ವಿವಿಧ ಯೋಜನೆಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಖರೀದಿಸಲಾಗುವ ಹೊಸ ಬಸ್‌ಗಳ ಪೈಕಿ 2500 ಬಸ್‌ಗಳನ್ನು ಬಿಎಂಟಿಸಿಗೆ, ಉಳಿದವನ್ನು ರಾಜ್ಯದ ನಗರ ಮತ್ತು ಪಟ್ಟಣಗಳಿಗೆ ಸಾರಿಗೆ ಸೌಲಭ್ಯಕ್ಕೆ ನೀಡಲಾಗುವುದು ಎಂದು ತಿಳಿಸಿದರು. ಈಶಾನ್ಯ ಮತ್ತು ವಾಯವ್ಯ ಸಾರಿಗೆ ವಿಭಾಗಗಳಲ್ಲೂ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.