ADVERTISEMENT

50 ಸಾವಿರ ಜನರು ಅತಂತ್ರ?

ಹೆದ್ದಾರಿ ಬದಿ ಮದ್ಯದಂಗಡಿಗಳ ಸ್ಥಳಾಂತರ ‘ಸುಪ್ರೀಂ’ ಆದೇಶದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 20:10 IST
Last Updated 13 ಜೂನ್ 2017, 20:10 IST
50 ಸಾವಿರ ಜನರು ಅತಂತ್ರ?
50 ಸಾವಿರ ಜನರು ಅತಂತ್ರ?   

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2,500 ಮದ್ಯದಂಗಡಿಗಳ ಸ್ಥಳಾಂತರ ಅನಿವಾರ್ಯವಾಗಿದ್ದು, ಸುಮಾರು 50 ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ನಗರ ಪ್ರದೇಶಗಳಲ್ಲಿ ಹೆದ್ದಾರಿ ಬದಿಯಿಂದ 500 ಮೀಟರ್‌ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 220 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಕೋರ್ಟ್‌ ಆದೇಶದಿಂದಾಗಿ ಸ್ಥಳಾಂತರ ಮಾಡಬೇಕಿರುವ ಅಂಗಡಿಗಳ  ಬಗ್ಗೆ ಅಬಕಾರಿ ಇಲಾಖೆ ಸಮೀಕ್ಷೆ ನಡೆಸಿದ್ದು, ಒಟ್ಟಾರೆ  6,015 ಅಂಗಡಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಇದರಲ್ಲಿ 2,500 ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿವೆ.

ADVERTISEMENT

858 ಕಿಮೀ ಡಿನೋಟಿಫೈಗೆ ಶಿಫಾರಸು: ನಗರ ಮತ್ತು ಪಟ್ಟಣಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 858 ಕಿ.ಮೀ ಅನ್ನು
ಡಿನೋಟಿಫೈ (ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳೀಯ ರಸ್ತೆಯಾಗಿ ಘೋಷಿಸುವುದು) ಮಾಡುವಂತೆ  ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸಿದರೆ ನಗರ ಮತ್ತು ಪಟ್ಟಣ ಪ್ರದೇಶಗಳ ಹೆದ್ದಾರಿ ಬದಿಯ 3,515 ಅಂಗಡಿಗಳು ಉಳಿದುಕೊಳ್ಳಲಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ 220 ಮೀಟರ್‌ ದೂರಕ್ಕೆ ಮದ್ಯದಂಗಡಿಗಳು ಸ್ಥಳಾಂತರ ಆಗುವುದು ಅನಿವಾರ್ಯ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಸ್ಥಳಾಂತರ ದುಬಾರಿ: ಮದ್ಯದಂಗಡಿ ಸ್ಥಳಾಂತರ ಅತ್ಯಂತ ದುಬಾರಿ ಆಗುವುದರಿಂದ ಬಹುತೇಕರು ಬಾಗಿಲು ಮುಚ್ಚುವ ಬಗ್ಗೆ ಆಲೋಚಿಸುತ್ತಿದ್ದಾರೆ. ಅಂಗಡಿಗಳ ಸ್ಥಳಾಂತರ ಮಾಡುವುದಾದರೆ ರಸ್ತೆ ಬದಿಯಿಂದ 220 ಮೀಟರ್‌ ದೂರದಲ್ಲಿ ಜಾಗ ಹುಡುಕಬೇಕು.  ಗ್ರಾಮ ಪಂಚಾಯ್ತಿ ಅನುಮತಿ ಪಡೆಯಬೇಕು. ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಸಿಕೊಳ್ಳಬೇಕು.  ಮಳಿಗೆ ನಿರ್ಮಿಸಬೇಕು.

ಮಹಿಳಾ ಸಂಘಗಳ ವಿರೋಧ ಎದುರಿಸಬೇಕು. ಒಟ್ಟಾರೆ ಅಂಗಡಿ  ಮಾಲೀಕತ್ವ ಉಳಿಸಿಕೊಳ್ಳಲು ಮದ್ಯ ಮಾರಾಟಗಾರರು ಕನಿಷ್ಠ ₹ 50 ಲಕ್ಷ ಖರ್ಚು ಮಾಡಬೇಕಾಗುತ್ತದೆ ಎಂದು ಮದ್ಯ ಮಾರಾಟಗಾರರ ಸಂಘ ಅಂದಾಜಿಸಿದೆ.

‘ಇದರಿಂದಾಗಿ ಶೇ 90ರಷ್ಟು ಅಂಗಡಿಗಳು ಸ್ಥಳಾಂತರದ ಬದಲು ಬಾಗಿಲು ಮುಚ್ಚುವ ಸಾಧ್ಯತೆ ಇದೆ’ ಎಂದು ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್‌. ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆದ್ದಾರಿ ಬದಿ ಅಂಗಡಿಗಳು ಮುಚ್ಚಿದರೆ ಸುಮಾರು 50 ಸಾವಿರ ಕುಟುಂಬಗಳು ತೊಂದರೆಗೆ ಸಿಲುಕುವ ಸಂಭವ ಇದೆ. ತಲೆತಲಾಂತರದಿಂದ ಈ ಕಸುಬು ನಂಬಿರುವ ಇಡೀ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ. ಬೇರೆ ಉದ್ಯೋಗಕ್ಕೆ ಹೊರಳುವುದು  ಕಷ್ಟ’ ಎಂದು ಹೇಳಿದರು.

38 ಅಂಗಡಿ ಸ್ಥಳಾಂತರ
ಹೆದ್ದಾರಿ ಬದಿ ಇರುವ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಅಬಕಾರಿ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು,  ರಾಜ್ಯದಾದ್ಯಂತ ಇದುವರೆಗೆ 38 ಅಂಗಡಿಗಳು ಸ್ಥಳಾಂತರ ಆಗಿವೆ. ಉಳಿದ ಅಂಗಡಿಗಳನ್ನು ಇದೇ 30ರೊಳಗೆ ಸ್ಥಳಾಂತರ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು  ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ ಸಿಗರನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.