ADVERTISEMENT

ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ಜಾತ್ರೆ ಪ್ರಯುಕ್ತ ಅಂಗಡಿ ಮಳಿಗೆಗಳ ನಿರ್ಮಾಣ ಕಾರ್ಯ ಸೋಮವಾರ ನಡೆಯಿತು
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ಜಾತ್ರೆ ಪ್ರಯುಕ್ತ ಅಂಗಡಿ ಮಳಿಗೆಗಳ ನಿರ್ಮಾಣ ಕಾರ್ಯ ಸೋಮವಾರ ನಡೆಯಿತು   

ಚಾಮರಾಜನಗರ: ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜ. 2ರಿಂದ ಆರಂಭವಾಗುತ್ತಿದೆ. ಐದು ದಿನ ವಿಜೃಂಭಣೆಯಿಂದ ನಡೆಯಲಿದ್ದು, ಐತಿಹಾಸಿಕ ಪ್ರಾಮುಖ್ಯ ಪಡೆದಿದೆ.

15–16ನೇ ಶತಮಾನದ ಸಿದ್ಧಪುರುಷ ಮಂಟೇಸ್ವಾಮಿ ಅವರ ಶಿಷ್ಯಂದಿರಲ್ಲಿ ಒಬ್ಬರಾದ ಸಿದ್ದಪ್ಪಾಜಿ, ಗುರುವಿನ ಅಪೇಕ್ಷೆಯಂತೆ ನೀಲಗಾರನಾಗಿ ಮಳವಳ್ಳಿ ತಾಲ್ಲೂಕಿನ ಹಲಗೂರಿನ ಪಂಚಾಳರಿಂದ ಕಬ್ಬಿಣ ಭಿಕ್ಷೆ ತರುತ್ತಾರೆ. ನಂತರ ಕಾವೇರಿ ನದಿಯನ್ನು ದಾಟಿ ಬಂದು ಇಲ್ಲಿನ ಬೊಪ್ಪೆಗೌಡನಪುರದಲ್ಲಿ ನೆಲೆಸುತ್ತಾರೆ. ಸುತ್ತಮುತ್ತಲ ಏಳು ಹಳ್ಳಿಗಳಲ್ಲಿ ಪವಾಡಗಳನ್ನು ಮೆರೆದು, ಕೊನೆಗೆ ಚಿಕ್ಕಹಲಗೂರಿನಲ್ಲಿ ಐಕ್ಯವಾಗುತ್ತಾರೆ ಎನ್ನುವುದು ಪ್ರತೀತಿ. ಚಿಕ್ಕಹಲಗೂರು ಕಾಲಕ್ರಮೇಣ ಚಿಕ್ಕಲ್ಲೂರು ಎಂಬ ಹೆಸರು ಪಡೆದುಕೊಂಡಿದೆ.

ಸಿದ್ದಪ್ಪಾಜಿಯ ಪವಾಡಗಳನ್ನು ಕಂಡು ಅವರಿಗೆ ಕಬ್ಬಿಣ ಭಿಕ್ಷೆ ನೀಡುವ ಇಲ್ಲಿನ ಏಳು ಊರುಗಳ ಜನರು ಸೇರಿ ಚಿಕ್ಕಲ್ಲೂರು ಜಾತ್ರೆ ನಡೆಸುತ್ತಾರೆ. ಹೊಸ ವರ್ಷದ ಮೊದಲ ಹುಣ್ಣಿಮೆಯಿಂದ ಐದು ಹಗಲು, ಐದು ರಾತ್ರಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ.

ADVERTISEMENT

ಮಂಗಳವಾರ ಮಧ್ಯರಾತ್ರಿ ನಡೆಯುವ ಚಂದ್ರಮಂಡಲ ಉತ್ಸವದೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರಕಲಿದೆ. ಬಿದಿರು, ನಾರುಗಳಿಂದ ತಯಾರಿಸಿದ ಸುಮಾರು 15 ಅಡಿ ಎತ್ತರದ ಚಂದ್ರಮಂಡಲವನ್ನು ಹೂವು, ಹೊಂಬಾಳೆಗಳಿಂದ ಸಿಂಗರಿಸಲಾಗುತ್ತದೆ. ಸಿದ್ದಪ್ಪಾಜಿಯ ಐಕ್ಯಗದ್ದಿಗೆ ಮುಂದೆ ನಿಲ್ಲಿಸಲಾಗುತ್ತದೆ. ಚಂದ್ರಮಂಡಲವನ್ನು ಸಿದ್ಧಪಡಿಸುವ ವಿವಿಧ ಕೆಲಸಗಳು ಈ ಏಳು ಗ್ರಾಮಗಳ ಗ್ರಾಮಸ್ಥರಿಗೆ ಹಂಚಿಕೆಯಾಗಿದೆ.

ಹುಣ್ಣಿಮೆ ರಾತ್ರಿ 12 ಗಂಟೆಗೆ ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನಮಠದ ಧರ್ಮಾಧಿಕಾರಿ ಚಂದ್ರಮಂಡಲಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ನೀಲಗಾರರು, ಸತ್ತಿಗೆ ಸೂರಿಪಾನಿ, ಕೊಂಬುಕಹಳೆ, ಉರಿಕಂಡಾಯಗಳ ದಂಡು ಸುತ್ತಲೂ ನೆರೆದಿರುತ್ತದೆ. ಆಕಾಶಮುಖಿಯಾದ ಚಂದ್ರಮಂಡಲವನ್ನು ಉರಿಸುತ್ತಾರೆ. ಧರೆಗೆ ದೊಡ್ಡವರ ಪಾದಕ್ಕೆ ಉಘೇ ಹಾಕುತ್ತಾ ಭಕ್ತರು ಹಣ್ಣು, ದವಸಧಾನ್ಯಗಳನ್ನು ಎಸೆದು ಹರಕೆ ಒಪ್ಪಿಸುತ್ತಾರೆ. ಚಂದ್ರಮಂಡಲ ಉರಿಯುವ ವೇಳೆ ಬಾಗುವ ದಿಕ್ಕಿನಲ್ಲಿ ಪ್ರಸಕ್ತ ವರ್ಷ ಸಮೃದ್ಧಿ ಉಂಟಾಗುತ್ತದೆ ಎನ್ನುವುದು ಜನರ ನಂಬಿಕೆ.

ಶೈವ–ವೈಷ್ಣವ ಸೌಹಾರ್ದದ ಪ್ರತೀಕವಾಗಿ ಶೈವಸಿದ್ದ ಹಿನ್ನೆಲೆಯವರಾದ ನೀಲಗಾರರು ಒಂದು ದಿನದ ಮಟ್ಟಿಗೆ ವೈಷ್ಣವ ಸಂಪ್ರದಾಯ ಪಾಲಿಸುತ್ತಾರೆ.

ಮಂಟೇಸ್ವಾಮಿ ಉತ್ತರ ಕರ್ನಾಟಕದ ಕೊಡೇಕಲ್ಲ ಬಸವಣ್ಣನ ಶಿಷ್ಯನಾಗಿ ಕಾಯಸಿದ್ಧಿ ಪಡೆದಿದ್ದರಿಂದ ಕೊಡೇಕಲ್ಲ ಮಠದ ಭಕ್ತರೂ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಜಾತ್ರೆಯು ಭಕ್ತಿಯ ಸಂಕೇತ ಮಾತ್ರವಲ್ಲದೆ, ಈ ಭಾಗದ ಜನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ಆಚರಣೆಯೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.