ADVERTISEMENT

ಪಟ್ಟಣದ ಸನಿಹಕ್ಕೆ ಬಂದ ಹುಲಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯಲ್ಲಿದ್ದ ಹುಲಿ ಶುಕ್ರವಾರ ಪಟ್ಟಣದಿಂದ 5 ಕಿ.ಮೀ ದೂರಕ್ಕೆ ಬಂದಿದ್ದು, ಆತಂಕ ಮೂಡಿಸಿದೆ.

ಜ. 1ರಂದು ಹೊನ್ನಮ್ಮನಕಟ್ಟೆಯಲ್ಲಿದ್ದ ಹುಲಿ ದಮ್ಮನಹಳ್ಳಿ, ಸೋಗಳ್ಳಿ, ನೂರಳಕುಪ್ಪೆಗೆ ಬಂದಿದೆ. ಇಲ್ಲಿಂದ ಕಾಡು ಹಾದಿಯಲ್ಲಿ 5 ಕಿ.ಮೀ ಕ್ರಮಿಸಿದರೆ ತಾಲ್ಲೂಕು ಕೇಂದ್ರ ಸಿಗುತ್ತದೆ.

ಇದರಿಂದ ಹುಲಿ ಸೆರೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಬಂಡೀಪುರದಿಂದ ‘ರಾಣಾ’ ಶ್ವಾನವನ್ನು ಕರೆಸಿ ಶೋಧಕಾರ್ಯ ನಡೆಸಿದ್ದಾರೆ. ಡ್ರೋಣ್ ಕ್ಯಾಮೆರಾ ಬಳಕೆಯೂ ಯಾವುದೇ ಫಲ ನೀಡಲಿಲ್ಲ.

ADVERTISEMENT

ಬೇಸ್ತುಬಿದ್ದ ಸಿಬ್ಬಂದಿ: ಕೆಲವು ಗ್ರಾಮಸ್ಥರು ಪೊದೆಗಳ ಹಿಂದೆ ಹುಲಿ ಅಡಗಿದೆ ಎಂದು ಮಾಹಿತಿ ನೀಡಿದರು. ಮೇಲ್ನೋಟಕ್ಕೆ ಪೊದೆಯಲ್ಲಿದ್ದ ಗಿಡಗಂಟಿಗಳು ಅಲುಗಾಡುತ್ತಿದ್ದವು. ಇದನ್ನು ಗಮನಿಸಿದ ಸಿಬ್ಬಂದಿ ಹುಲಿ ಎಂದು ಭಾವಿಸಿ ಮರವೇರಿ ಅರಿವಳಿಕೆ ಚುಚ್ಚುಮದ್ದನ್ನು ಸಿದ್ಧಪಡಿಸಿಕೊಂಡು ಕಾದು ಕುಳಿತರು. ಮಧ್ಯಾಹ್ನವಾದರೂ ಯಾವುದೇ ಪ್ರಾಣಿ ಹೊರಗಡೆ ಬರದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಪೊದೆ ಬಳಿ ನೋಡಿದಾಗ 20ಕ್ಕೂ ಹೆಚ್ಚಿನ ಕಾಡುಹಂದಿಗಳ ಹಿಂಡು ಕಂಡು ಬಂತು.

ಹುಲಿ ಹೆಜ್ಜೆ ಗುರುತು ಪತ್ತೆ: ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಾಗೂ ಮಲ ದೊರೆತಿದೆ. ಇದರ ಜತೆಗೆ ಹಂದಿಯೊಂದನ್ನು ತಿಂದು ಬಿಟ್ಟ ಮಾಂಸವೂ ಸಿಕ್ಕಿದೆ. ಇದರಿಂದ ಹುಲಿ ಇರುವುದು ಖಚಿತವಾಗಿದೆ. ‘ರಾಣಾ‌’ ಶ್ವಾನವು ಹುಲಿಯ ಜಾಡುಹಿಡಿದು ಕಬಿನಿ ಹಿನ್ನೀರಿನವರೆಗೆ ಹೋಗಿ ವಾಪಾಸ್ಸಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.