ADVERTISEMENT

ಎಂ.ಎಸ್.ಸ್ವಾಮಿನಾಥನ್‌ಗೆ ಬಸವಕೃಷಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST

ಬಾಗಲಕೋಟೆ: ಕೂಡಲಸಂಗಮದ ಪಂಚಮಸಾಲಿ ಪೀಠದ ವತಿಯಿಂದ ನೀಡಲಾಗುವ ‘ಬಸವ ಕೃಷಿ’ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ, ಕೃಷಿ ತಜ್ಞ, ತಮಿಳುನಾಡಿನ ಡಾ. ಎಂ.ಎಸ್‌. ಸ್ವಾಮಿನಾಥನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹ 1 ಲಕ್ಷ ನಗದು, ತಾಮ್ರಫಲಕ ಒಳಗೊಂಡಿದೆ. ಜ. 24ರಂದು ಚೆನ್ನೈನ ಡಾ. ಸ್ವಾಮಿನಾಥನ್ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಪ್ರಶಸ್ತಿಯನ್ನು ಇದುವರೆಗೂ ಸಂಕ್ರಾಂತಿಯ ದಿನ ಕೂಡಲಸಂಗಮದಲ್ಲೇ ನೀಡಲಾಗುತ್ತಿತ್ತು. ಬಸವಣ್ಣನ ಕಾಯಕ ತತ್ವಗಳನ್ನು ತಮಿಳುನಾಡಿನ ರೈತರಿಗೂ ತಿಳಿಸಬೇಕು ಎಂಬ ಕಾರಣಕ್ಕಾಗಿ ಚೆನ್ನೈನಲ್ಲಿ ಸಮಾರಂಭ ಇಟ್ಟುಕೊಳ್ಳಲಾಗಿದೆ. ಈ ಬಾರಿ ಜ. 14ರಂದು ಕೂಡಲಸಂಗಮ ಪೀಠದಲ್ಲಿ ಕೃಷಿ ಸಂಕ್ರಾಂತಿ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಕೃಷಿ ವರದಿ ಅನುಷ್ಠಾನದ ಕುರಿತು ರೈತರಿಗೆ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದರು.

ADVERTISEMENT

ಈ ಹಿಂದೆ ಜಲತಜ್ಞ ರಾಜೇಂದ್ರಸಿಂಗ್, ಗಾಂಧಿವಾದಿ ಅಣ್ಣಾ ಹಜಾರೆ, ಪರಿಸರವಾದಿ ಮೇಧಾ ಪಾಟ್ಕರ್, ಸಾಮಾಜಿಕ ಕಾರ್ಯಕರ್ತ ಬಾಬಾ ಅಢಾವೆ ಹಾಗೂ ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರಿಗೆ ಬಸವ ಕೃಷಿ ಪ್ರಶಸ್ತಿ ನೀಡಲಾಗಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.