ADVERTISEMENT

4 ವಾರಗಳಲ್ಲೇ ವರದಿ ನೀಡಬೇಕು ಲಿಂಗಾಯತ ಸ್ವಾಮೀಜಿಗಳ ಒತ್ತಡ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
4 ವಾರಗಳಲ್ಲೇ ವರದಿ ನೀಡಬೇಕು ಲಿಂಗಾಯತ ಸ್ವಾಮೀಜಿಗಳ ಒತ್ತಡ
4 ವಾರಗಳಲ್ಲೇ ವರದಿ ನೀಡಬೇಕು ಲಿಂಗಾಯತ ಸ್ವಾಮೀಜಿಗಳ ಒತ್ತಡ   

ಬೆಂಗಳೂರು: ವೀರಶೈವ– ಲಿಂಗಾಯತರಿಗೆ ಸ್ವತಂತ್ರ ಧರ್ಮ ಸ್ಥಾನ ನೀಡುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ರಚಿಸಿರುವ ಸಮಿತಿ 6 ತಿಂಗಳ ಕಾಲಾವಕಾಶ ಕೇಳಿರುವ ಬಗ್ಗೆ ಲಿಂಗಾಯತ ಮಠಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲ ಹರಣ ಮಾಡುವ ಉದ್ದೇಶದಿಂದ ಆರು ತಿಂಗಳ ಕಾಲಾವಕಾಶ ಕೇಳಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಈ ಸಮಿತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರು ನೀಡುವ ವರದಿಯನ್ನು ಒಪ್ಪುವುದಿಲ್ಲ ಎಂದು ವೀರಶೈವ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ. ಸ್ವಾಮೀಜಿಗಳ ಅಭಿಪ್ರಾಯವನ್ನು ಇಲ್ಲಿ ನೀಡಲಾಗಿದೆ.

ಲೋಪ ಸರಿಪಡಿಸಿ

ರಾಜ್ಯ ಸರ್ಕಾರ ತಜ್ಞರ ಸಮಿತಿ ನೇಮಕ ಮಾಡಿದ್ದರಿಂದ ಸಂತೋಷ ಆಗಿತ್ತು. ಆದರೆ, ಸಮಿತಿಯ ಪ್ರಥಮ ಸಭೆಯಲ್ಲೇ ಆರು ತಿಂಗಳ ಕಾಲಾವಕಾಶ ಕೇಳಿರುವುದು ಕೆಲವರಲ್ಲಿ ಅಸಂತೋಷ ಮತ್ತು ನಿರಾಶೆ ಮೂಡಿಸಿದೆ. ಸರ್ಕಾರ ಈ ಲೋಪವನ್ನು ಸರಿಪಡಿಸುತ್ತದೆ ಎಂಬ ವಿಶ್ವಾಸವಿದೆ. ಆದಷ್ಟು ಬೇಗ ವರದಿ ಹೊರಬೇಕು.

ADVERTISEMENT

– ಶಿವಮೂರ್ತಿ ಮುರುಘಾ ಶರಣರು

***

ವಿಳಂಬವಾದರೂ ನಿಲ್ಲಿಸಲಾಗದು

ಲಿಂಗಾಯತ ಧರ್ಮ ವೈಚಾರಿಕ, ವೈಜ್ಞಾನಿಕ ತಳಹದಿಯ ಧರ್ಮ. ವೈಚಾರಿಕತೆಗೆ ವಿರುದ್ಧವಾಗಿರುವ ಕರ್ಮಠ ಜಾತಿವಾದಿ ಸಂಘಟನೆಗೆ ಮುಳುವಾಗಬಹುದು ಎಂಬ ಭಯ ಅವರನ್ನು ಕಾಡುತ್ತಿದೆ.  ಧರ್ಮದ ಮಾನ್ಯತೆ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ವಿಳಂಬವಾಗಬಹುದು ವಿನಃ ನಿಲ್ಲಿಸಲು ಸಾಧ್ಯವಿಲ್ಲ. ಲಿಂಗಾಯತ ಧರ್ಮಕ್ಕೆ ಮುನ್ನಡಿ ಬರೆದಾಗಿದೆ.

– ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ, ಗದಗ

***

ಚಳವಳಿಯೇ ನೆಲಕಚ್ಚುತ್ತದೆ

ನ್ಯಾ.ನಾಗಮೋಹನದಾಸ್‌ ಸಮಿತಿ ವರದಿ ಸಲ್ಲಿಸಲು ಆರು ತಿಂಗಳು ಸಮಯ ಕೇಳಿರುವುದರಿಂದ ಲಿಂಗಾಯತ ಚಳವಳಿಯೆ ನೆಲಕಚ್ಚುತ್ತದೆ.

ಈಗಾಗಲೇ ಸರ್ಕಾರದ ಮುಂದೆ ಲಿಂಗಾಯತ ಮತ್ತು ವೀರಶೈವರು ನೀಡಿರುವ ಮನವಿ ಮತ್ತು ಅಹವಾಲುಗಳಿವೆ. ಸಾಕಷ್ಟು ಸಾಕ್ಷ್ಯವೂ ಸರ್ಕಾರದ ಬಳಿ ಇದೆ. ಇದನ್ನು ನೋಡಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು.

ಸಮಿತಿ ಸರ್ಕಾರ ನೀಡಿದ್ದ ಒಂದು ತಿಂಗಳು ಸಾಕಾಗಿತ್ತು. ಸಾರ್ವಜನಿಕರಿಂದ ಅಹವಾಲು ಸಲ್ಲಿಸಲು ಕೋರಿರುವುದರಿಂದ ಇದು ಮತ್ತಷ್ಟು ಗೊಂದಲ ಉಂಟಾಗುವುದು ನಿಶ್ಚಿತ. ಸಮಿತಿ ಹೆಚ್ಚು ಕಾಲಾವಕಾಶ ಕೇಳಿರುವುದೇ ತಪ್ಪು ಹೆಜ್ಜೆ.

ಸರ್ಕಾರ ನಿಗದಿ ಮಾಡಿರುವ ಸಮಯದೊಳಗೇ ವರದಿ ನೀಡುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಬೇಕು.

– ಸಿದ್ದರಾಮ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ

***

ತಕ್ಷಣ ನೀಡದಿದ್ದರೆ ಪ್ರತಿಭಟನೆ

ಸಮಿತಿ ಆರು ತಿಂಗಳು ಕೇಳಿರುವುದರಿಂದ ರಾಜ್ಯಾದ್ಯಂತ ಜನ ಆಕ್ರೋಶಗೊಂಡಿದ್ದಾರೆ. ಬೇಗ ಒಂದು ನಿರ್ಣಯ ಆಗುತ್ತದೆ ಎಂಬ ಭರವಸೆ ಇತ್ತು. ಸರ್ಕಾರದ ಮೇಲೆ ಒತ್ತಡ ಹಾಕಲು ದೊಡ್ಡ ಪ್ರತಿಭಟನೆ ನಡೆಸಲಾಗುವುದು. ಸಮಿತಿ ಆರು ತಿಂಗಳು ಕಾಲಾವಕಾಶ ಕೇಳಿರುವುದು ಷಡ್ಯಂತ್ರ. ಸಮಿತಿ ವಿಳಂಬ ಮಾಡಿದಷ್ಟು ಜನ ರೊಚ್ಚಿಗೇಳುವ ಸಾಧ್ಯತೆ ಇದೆ. ವಿವಿಧ ನೆಪವೊಡ್ಡಿ ಕಾಲಹರಣ ಮಾಡುವುದನ್ನು ನಾವು ಸಹಿಸುವುದಿಲ್ಲ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ, ಶಾಂತಿಯುತ ಹೋರಾಟ ಉಗ್ರಸ್ವರೂಪ ತಾಳುತ್ತದೆ.

– ಅಕ್ಕ ಅನ್ನಪೂರ್ಣ, ಅಧ್ಯಕ್ಷೆ, ಬಸವ ಸೇವಾ ಪ್ರತಿಷ್ಠಾನ, ಬೀದರ್

***

ವರದಿ ಒಪ್ಪಿಕೊಳ್ಳುವುದಿಲ್ಲ

ಸರ್ಕಾರ ರಚಿಸಿದ ಸಮಿತಿಯನ್ನು ನಾವು ಒಪ್ಪಿಲ್ಲ. ಸಮಿತಿಯಲ್ಲಿ ಏಕಪಕ್ಷೀಯ ಅಭಿಪ್ರಾಯವುಳ್ಳವರೇ ಸದಸ್ಯರಿದ್ದಾರೆ. ಇವರಿಗೆ ವೀರಶೈವ– ಲಿಂಗಾಯತ ಧರ್ಮದ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಇರಬಹುದೇ ಹೊರತು ಪರಿಪೂರ್ಣ ತಿಳಿವಳಿಕೆ ಇಲ್ಲ. ಇಂತಹ ಸಮಿತಿಗೆ ಆರು ತಿಂಗಳಲ್ಲ, ಆರು ವರ್ಷ ಕೊಟ್ಟರೂ ಯಾವುದೇ ಪ್ರಯೋಜನ ಇಲ್ಲ. ಈ ಧರ್ಮದ ಸಿದ್ಧಾಂತ ಮತ್ತು ಸಾಹಿತ್ಯ ತಿಳಿದುಕೊಳ್ಳಲು ನಾಲ್ಕು ವಾರ ಅಥವಾ ಆರು ತಿಂಗಳು ಸಾಲುವುದಿಲ್ಲ. ಸರ್ಕಾರ ದುಡುಕಿನ ನಿರ್ಧಾರ ಮಾಡಿ ಸಮಿತಿಯನ್ನು ರಚಿಸಿದೆ. ಅದು ಸಲ್ಲಿಸುವ ವರದಿಗೆ ಯಾವುದೇ ಬೆಲೆ ಇಲ್ಲ. ಅದನ್ನು ನಾವು ಒಪ್ಪಿಕೊಳ್ಳುವುದೂ ಇಲ್ಲ.

– ದಿಂಗಾಲೇಶ್ವರ ಸ್ವಾಮೀಜಿ, ಬಾಲೆಹೊಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.