ADVERTISEMENT

ತಜ್ಞರ ಸಭೆಯಲ್ಲಿ ‘ವೀರಶೈವರ’ ಗದ್ದಲ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ತಜ್ಞರ ಸಭೆಯಲ್ಲಿ ‘ವೀರಶೈವರ’ ಗದ್ದಲ
ತಜ್ಞರ ಸಭೆಯಲ್ಲಿ ‘ವೀರಶೈವರ’ ಗದ್ದಲ   

ಬೆಂಗಳೂರು: ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆ ನೀಡಲು ಸರ್ಕಾರ ರಚಿಸಿರುವ ತಜ್ಞರ ಸಮಿತಿ ಶನಿವಾರ ನಡೆಸಿದ ಸಭೆಯ ವೇಳೆ  ತಕ್ಷಣವೇ ತಮ್ಮ ಅಹವಾಲುಗಳನ್ನು ಕೇಳಬೇಕು ಎಂದು ಗುಂಪೊಂದು ಕೂಗಾಡಿ ಗದ್ದಲ ಎಬ್ಬಿಸಿತು.

‘ಇವತ್ತೇ ವಿಚಾರಣೆ ಆರಂಭಿಸಬೇಕು ಎಂದು ಬಂದವರು ಆಗ್ರಹಿಸಿದರು. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಆ ರೀತಿ ಮಾಡಲು ಸಾಧ್ಯವಿಲ್ಲ. ಅಹವಾಲು ಸ್ವೀಕಾರ ಮಾಡಿದ ಬಳಿಕವೇ ವಿಚಾರಣೆ ಆರಂಭಿಸಲಾಗುವುದು ಎಂದು ಹೇಳಿದರೂ ಅವರು ಗದ್ದಲ ಎಬ್ಬಿಸಿದರು’ ಎಂದು ಮೂಲಗಳು ತಿಳಿಸಿವೆ.

‘ನಾವು ವಿಚಾರಣೆ ಆರಂಭಿಸುವ ದಿನಾಂಕವನ್ನು ತಿಳಿಸುತ್ತೇವೆ. ಆಗ ಬಂದು ನಿಮ್ಮ ವಿಚಾರಗಳನ್ನು ಹೇಳಬಹುದು ಎಂದು ಹೇಳಿದ ಬಳಿಕ ಅಲ್ಲಿಂದ ಹೊರಟರು. ಗಲಾಟೆ ಮಾಡಿದವರು ವೀರಶೈವ ಗುಂಪಿನವರು’ ಎಂದು ಮೂಲಗಳು ಹೇಳಿವೆ.

ADVERTISEMENT

ಮಾತಿನ ಚಕಮಕಿ
ವಿಧಾನಸೌಧದ ಕೊಠಡಿ ಸಂಖ್ಯೆ 222ರ ಒಳಗೆ ವಕೀಲರನ್ನು ಬಿಡಲು ನಿರಾಕರಿಸಲಾಯಿತು. ಇದರಿಂದ ವಕೀಲ ಗಂಗಾಧರ ಗುರುಮಠ ಮತ್ತು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನಿಸ್‌ ಸಿರಾಜ್‌ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಸಭೆ 10.30ಕ್ಕೆ ನಿಗದಿಯಾಗಿತ್ತು. ಆಗ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ ದಾಸ್‌ ಇನ್ನೂ ಸಭೆಗೆ ಬಂದಿರಲಿಲ್ಲ. 10.40ರ ವೇಳೆಗೆ ಗಂಗಾಧರ ಗುರುಮಠ ಮತ್ತು ಅವರ ಕಡೆಯ ಮೂರ್ನಾಲ್ಕು ಜನ ಸಮಿತಿ ಸಭೆ ನಡೆಯುತ್ತಿದ್ದ ಕೊಠಡಿಯೊಳಗೆ ಪ್ರವೇಶಿಸಿದರು. ಇದಕ್ಕೆ ಸಭೆಯಲ್ಲಿ ಅನಿಸ್‌ ಸಿರಾಜ್‌ ಆಕ್ಷೇಪಿಸಿದರು. ಇದರಿಂದ ವಾತಾವರಣ ಕಾವೇರಿತು ಎನ್ನಲಾಗಿದೆ.

ಫೆ 2 ರಿಂದ ವಿಚಾರಣೆ:

ಫೆಬ್ರುವರಿ 2 ಮತ್ತು 3 ರಂದು ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಫೆ.5 ರಿಂದ ಸತತವಾಗಿ ಸಭೆ ನಡೆಯಲಿದೆ. ಸಮಿತಿ ಯಾರು ಅಹವಾಲು ನೀಡಿದ್ದಾರೋ ಅವರನ್ನು ಮಾತ್ರ ವಿಚಾರಣೆ ನಡೆಸಲಾಗುವುದು. ಬೇರೆಯವರು ಹಾಜರಾಗಲು ಅವಕಾಶ ಇಲ್ಲ. ಇಲ್ಲವಾದರೆ ಗಲಾಟೆಗೆ ಕಾರಣವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಸಮಿತಿಗೆ ಸುಮಾರು 55 ಮನವಿಗಳು ಸಲ್ಲಿಕೆಯಾಗಿವೆ. ಅದನ್ನೆಲ್ಲಾ ಪರಿಶೀಲಿಸಿದ ಬಳಿಕ ಬಹಿರಂಗ ವಿಚಾರಣೆ ನಡೆಸಲಾಗುವುದು ಎಂದು ಸಮಿತಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.