ADVERTISEMENT

ಪೂಜಾರಿ ಆತ್ಮಚರಿತ್ರೆ ಪಾಪದ ಕೊಡ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST

ಶಿವಮೊಗ್ಗ: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಬರೆದಿರುವ ‘ಸಾಲಮೇಳದ ಸಂಗ್ರಾಮ’ ಎನ್ನುವ ಪುಸ್ತಕ ಅವರ ಆತ್ಮಚರಿತ್ರೆಯಲ್ಲ; ಅದೊಂದು ಪೂಜಾರಿ ಅವರ ಪಾಪದ ಕೊಡ ಎಂದು ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಶ್ರೇಷ್ಠ ರಾಜಕಾರಣಿ. ಅವರು ನಾಡಿಗೆ ನೀಡಿದ ಕೊಡುಗೆ ಏನು ಎಂಬುದು ಜನಾರ್ದನ ಪೂಜಾರಿ ಅವರಿಗೆ ಗೊತ್ತಿಲ್ಲ. ಪೂಜಾರಿ ತಮ್ಮ ಆತ್ಮಚರಿತ್ರೆಯಲ್ಲಿ ಇಂತಹವರನ್ನು ತೇಜೋವಧೆ ಮಾಡಿದ್ದಾರೆ. ಈ ಮೂಲಕ ಅವರ ಲಕ್ಷಾಂತರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರು ಇಂದಿರಾ ಗಾಂಧಿ ಅವರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದರು. ಹೊಡೆಯಲು ಹೋಗಿದ್ದರು ಎಂದು ಆತ್ಮಚರಿತ್ರೆಯಲ್ಲಿ ಸುಳ್ಳು ದಾಖಲಿಸಿದ್ದಾರೆ. ವಯಸ್ಸಿನ ಅರುಳು ಮರಳಿನಿಂದಾಗಿ ಅವರು ಈ ರೀತಿ ಬರೆದಿರುವ ಸಾಧ್ಯತೆ ಇದೆ. ಹೀಗಾಗಿ ಅವರ ಪುಸ್ತಕವನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಕೋರಿದರು.

ADVERTISEMENT

ಬಂಗಾರಪ್ಪನವರು ತಮ್ಮ ಮೇಲೆ ದಾಖಲಾಗಿದ್ದ ಮೂರೂ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು. ಆದರೂ ಅವರನ್ನು ಭ್ರಷ್ಟಾಚಾರಿ ಎಂದು ಹೇಳಿರುವುದು ನ್ಯಾಯಾಂಗ ನಿಂದನೆಯಾಗಿದೆ. ಪೂಜಾರಿ ಒಬ್ಬ ಹಿರಿಯ ರಾಜಕಾರಣಿಯಾಗಿ ಇನ್ನೊಬ್ಬ ನಾಯಕನ ಕುರಿತು ಬರೆಯುವಾಗ ಸತ್ಯಾಂಶ ಇರಬೇಕು. ಆತ್ಮಚರಿತ್ರೆಯನ್ನು ಪೂಜಾರಿ ತಮ್ಮ ತಲೆ ಮೇಲೆ ಹೊತ್ತುಕೊಂಡು ದೇವಸ್ಥಾನ ಸುತ್ತಿದ್ದಾರೆ. ಪುಸ್ತಕ ಮಾರಾಟವಾಗಲೆಂದೋ ಅಥವಾ ಜನರನ್ನು ದಾರಿ ತಪ್ಪಿಸಲೆಂದೋ ಈ ತಂತ್ರ ಹೂಡಿರಬೇಕು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.