ADVERTISEMENT

ಕಲಿಕಾ ಹಂತದಲ್ಲೇ ಕೋಮು ವಿಭಜನೆ: ಮತಾಂಧತೆಯ ಭಾವನೆ

ಪ್ರಜಾವಾಣಿ ವಿಶೇಷ
Published 6 ಫೆಬ್ರುವರಿ 2018, 20:16 IST
Last Updated 6 ಫೆಬ್ರುವರಿ 2018, 20:16 IST
ಕಲಿಕಾ ಹಂತದಲ್ಲೇ ಕೋಮು ವಿಭಜನೆ: ಮತಾಂಧತೆಯ ಭಾವನೆ
ಕಲಿಕಾ ಹಂತದಲ್ಲೇ ಕೋಮು ವಿಭಜನೆ: ಮತಾಂಧತೆಯ ಭಾವನೆ   

ಮಂಗಳೂರು: ಜನವರಿ 2ರಂದು ನಗರದ ಹೊರವಲಯದ ಕಾಲೇಜೊಂದರ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಇಬ್ಬರು ವಿದ್ಯಾರ್ಥಿನಿಯರ ಜತೆ  ಪಿಲಿಕುಳದ ಮಾನಸ ವಾಟರ್ ಪಾರ್ಕ್‌ಗೆ ಬಂದಿದ್ದರು. ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಹಿಂದೂ ಇನ್ನೊಬ್ಬಳು ಕ್ರಿಶ್ಚಿಯನ್. ಅವರನ್ನು ಅಡ್ಡಗಟ್ಟಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಸಂಪತ್‌ ನೇತೃತ್ವದ ಗುಂಪು ಪೊಲೀಸರ ಎದುರಲ್ಲೇ ಹಲ್ಲೆ ನಡೆಸಿತ್ತು. ಮುಸ್ಲಿಂ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೂ ಥಳಿಸಿತ್ತು.

2017ರ ಜೂನ್‌ 26ರಂದು ನಗರದ ಎಂಜಿನಿಯರಿಂಗ್‌ ಕಾಲೇಜೊಂದರ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕರು ಪುಸ್ತಕ ಮತ್ತಿತರ ಸ್ಟೇಷನರಿ ವಸ್ತುಗಳ ಖರೀದಿಗಾಗಿ ರಥಬೀದಿಗೆ ಬಂದಿದ್ದರು. ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಹಿಂದೂ ಉಪನ್ಯಾಸಕರ ಜೊತೆ ಬಂದಿದ್ದಾರೆಂಬ ಸುಳಿವು ಅರಿತು ಬೆನ್ನಟ್ಟಿ ಬಂದ ಮುಸ್ಲಿಂ ಯುವಕರ ಗುಂಪೊಂದು ಅವರ ಮೇಲೆ ಹಲ್ಲೆಗೆ ಯತ್ನಿಸಿತ್ತು.

ಇಂತಹ ಘಟನೆಗಳು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಮೂಲ ಹುಡುಕ ಹೊರಟರೆ ಒಂದೂವರೆ ದಶಕಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆ, ಕೋಮುವಾದಿ ಶಕ್ತಿಗಳ ಸತತ ಚಿತಾವಣೆಯ ಪ್ರಯತ್ನಗಳು ಫಲ ನೀಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ADVERTISEMENT

ಕೋಮುವಾದಿ ಸಂಘಟನೆಗಳು ಪ್ರಬಲವಾಗುವ ಜತೆಜತೆಗೆ ಹಿಂದೂ–ಮುಸ್ಲಿಂ ಎಂಬ ಭೇದವನ್ನು ಕಲಿಕಾ ಹಂತದ ಆರಂಭದಿಂದಲೇ ಮಕ್ಕಳ ಮಿದುಳಿಗೆ ತುಂಬುವ ಕೆಲಸ ನಡೆಯುತ್ತದೆ ಎಂಬ ಅಭಿಪ್ರಾಯ ಪೊಲೀಸ್ ಇಲಾಖೆ, ಪ್ರಜ್ಞಾವಂತರಲ್ಲಿದೆ. ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರಲ್ಲಿ ಧರ್ಮ, ಸಂಸ್ಕೃತಿಯ ಹೆಸರಿನಲ್ಲಿ ಮಕ್ಕಳ ಯೋಚನೆಗಳನ್ನು ಧಾರ್ಮಿಕ ಆಚರಣೆಗಳ ಪರಿಧಿಯೊಳಗೆ ಕಟ್ಟಿಹಾಕುವ ನಿರಂತರ ಪ್ರಯತ್ನಗಳು ನಡೆಯುತ್ತಿರುವುದು ಢಾಳಾಗಿ ಕಾಣಿಸುತ್ತದೆ.

ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳ ಮುಂಚೂಣಿಯಲ್ಲಿರುವ ಅನೇಕರು ಉಭಯ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅಲ್ಲಿ ‘ಹಿಂದೂ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂಬುದನ್ನು ಹಲವು ಶಿಕ್ಷಣ ಸಂಸ್ಥೆಗಳ ಧ್ಯೇಯಗಳಲ್ಲೇ ಹೇಳಲಾಗಿದೆ. ಅದೇ ರೀತಿಯಲ್ಲಿ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಲೇ ಇದೆ. ಉಭಯ ಜಿಲ್ಲೆಗಳಲ್ಲಿ ಸುಮಾರು 1,000 ಮದ್ರಸಾಗಳಿವೆ. ಅರೇಬಿಕ್‌ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಯಾ ಧರ್ಮಕ್ಕೆ ಸೇರಿದವರು ತಮ್ಮದೇ ಧರ್ಮದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಳುಹಿಸಲು ಆಸಕ್ತಿ ತೋರುತ್ತಿರುವುದು ಹೆಚ್ಚುತ್ತಿದೆ.

‘ಹಿಂದೂ ಮತ್ತು ಮುಸ್ಲಿಮರಿಗೆ ಪ್ರತ್ಯೇಕವಾದ ಶಾಲೆ–ಕಾಲೇಜುಗಳಿವೆ. ಹಿಂದೂಗಳು ಹೇಗಿರುತ್ತಾರೆ ಎಂದು ಮುಸ್ಲಿಂ ಮಕ್ಕಳಿಗೆ, ಮುಸ್ಲಿಮರು ಹೇಗಿರುತ್ತಾರೆ ಎಂದು ಹಿಂದೂ ಮಕ್ಕಳಿಗೆ  ಗೊತ್ತೇ ಇರುವುದಿಲ್ಲ. ಒಡನಾಟ ಹಾಗೂ ಸಹಪಾಠಿಗಳಾಗಿದ್ದರೆ ಮಾತ್ರ ಪರಸ್ಪರರು ಬೆರೆತು, ಕೂಡಿ ಕಲೆತು ಅರ್ಥ ಮಾಡಿಕೊಳ್ಳಲು ಸಾಧ್ಯ. ಅಂತಹ ಅರಿವಿಗೆ ಅವಕಾಶ ಇಲ್ಲದಂತೆ ಇಲ್ಲಿನ ವ್ಯವಸ್ಥೆ ಇದೆ. ಹಿಂದೂ ಮುಖಂಡರು ನಡೆಸುವ ವಿದ್ಯಾಮಂದಿರಗಳು, ಮುಸ್ಲಿಮರು ನಡೆಸುವ ಮದ್ರಸಾ ಹಾಗೂ ಶಾಲೆಗಳು ಇಲ್ಲಿ ಪ್ರತ್ಯೇಕ ಕೂಟದಂತೆ ಇವೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಪಾದಿಸುತ್ತಾರೆ.

‘ಇಲ್ಲಿನ ಬಹುತೇಕ ಯುವಕರಲ್ಲಿ ಕೋಮುವಾದಿ ರಕ್ತ ಹರಿಯುತ್ತಿದೆ. ಹಿಂದೂ ಕಂಡರೆ ಕೊಂದೇ ಬಿಡೋಣ ಎಂದು ಮುಸ್ಲಿಮನಲ್ಲಿ, ಮುಸ್ಲಿಂ ಕಂಡರೆ ಕತ್ತರಿಸಿಯೇ ಬಿಡೋಣ ಎಂದು ಹಿಂದೂಗಳಲ್ಲಿ ರಕ್ತ ಕುದಿಯುವಂತೆ ಮಾಡಲಾಗಿದೆ. ಗಡ್ಡ ಬಿಟ್ಟ ಮುಸ್ಲಿಂ ವ್ಯಕ್ತಿ ಮಚ್ಚು, ಲಾಂಗು ಹಿಡಿದಿರುತ್ತಾನೆ, ಕುಂಕುಮ ಹಚ್ಚಿದ ಹಿಂದೂ ಚಾಕುಚೂರಿ ಹಿಡಿದಿರುತ್ತಾನೆ ಎಂದೇ ಪರಸ್ಪರರು ಭಾವಿಸಿಕೊಳ್ಳುವಷ್ಟು ನಂಬಿಸಲಾಗಿದೆ. ಇದು ಮೂಲಭೂತ ಸಮಸ್ಯೆ’ ಎಂದೂ ಅವರು ವಿವರಿಸುತ್ತಾರೆ.

ತಮ್ಮ ಬರಹದ ಕಾರಣಕ್ಕೆ ಎರಡೂ ಸಮುದಾಯದ ವಿರೋಧವನ್ನು ಕಟ್ಟಿಕೊಂಡ ಹಿರಿಯ ಲೇಖಕಿಯೊಬ್ಬರು, ‘ಎರಡೂ ಕಡೆ ಬ್ರೈನ್ ವಾಶ್ ಮಾಡಲಾಗಿದೆ. ಮೂರ್ನಾಲ್ಕು ದಶಕಗಳ ಹಿಂದೆ ಎಲ್ಲ ಸಮುದಾಯದವರಿಗೂ ಒಂದೇ ಶಾಲೆ ಇರುತ್ತಿತ್ತು. ಈಗ ಬದಲಾಗಿದೆ. ಹಿಂದೂ–ಮುಸ್ಲಿಂ ಒಬ್ಬರಿಗೊಬ್ಬರು ಕಲೆಯುವ ಅಭ್ಯಾಸವೇ ಹೊರಟುಹೋಗಿದೆ. ಇದು ಸಮಸ್ಯೆಗೆ ಕಾರಣ’ ಎಂದು ವಿಶ್ಲೇಷಿಸುತ್ತಾರೆ.

ಸರ್ಕಾರಿ ಶಾಲೆಗಳಷ್ಟೇ ಇದ್ದಾಗ ಎಲ್ಲ ಜಾತಿ, ಧರ್ಮದ ಮಕ್ಕಳು ಒಟ್ಟಿಗೆ ಕಲಿಯುವ ಪರಿಪಾಠವಿತ್ತು. ಈಗ ಹಿಂದೂಗಳು ಹಾಗೂ ಮುಸ್ಲಿಮರು ಪ್ರತ್ಯೇಕ ಶಾಲೆ, ಕಾಲೇಜು ತೆರೆದಿದ್ದಾರೆ. ಹೀಗಾಗಿ ಸಹಭಾಗಿ ಶಿಕ್ಷಣ ಎಂಬುದು ಬಹುತೇಕ ಮರೆಯಾಗಿದೆ.

ಹಿಂದೂ ನಿಷ್ಠ, ರಾಷ್ಟ್ರಭಕ್ತಿಯಿಂದ ಕೂಡಿದ ಶಿಕ್ಷಣವನ್ನು ನೀಡುವ ಸಲುವಾಗಿ ಉರಿಮಜಲು ರಾಮಭಟ್ಟರು 1915ರಲ್ಲಿ ಆರಂಭಿಸಿದ ಪುತ್ತೂರಿನಲ್ಲಿ ವಿವೇಕಾನಂದ ಶಿಕ್ಷಣ ಟ್ರಸ್ಟ್‌ಗೆ ಅವರ ಭಾವ ಪ್ರಭಾಕರ್ ಭಟ್ಟರೇ ಈಗ ಅಧ್ಯಕ್ಷರು. ಕೋಮು ಸಂಘರ್ಷದ ಪ್ರಧಾನ ಕೇಂದ್ರವಾಗಿರುವ ಕಲ್ಲಡ್ಕದಲ್ಲಿ 1980ರಲ್ಲಿ ಭಟ್ ಆರಂಭಿಸಿದ ಶ್ರೀರಾಮ ಪ್ರೌಢಶಾಲೆ ಈಗ ವಿಶಾಲವಾಗಿ ಬೆಳೆದಿದೆ. ಧಾರ್ಮಿಕ ನೆಲೆಗಟ್ಟಿನ ಮೇಲೆ ಸಂಸ್ಕಾರಯುತ ಶಿಕ್ಷಣ ನೀಡಲು ಆರಂಭವಾದ ಈ ಶಾಲೆ ಈಗ 20 ಎಕರೆ ವಿಸ್ತೀರ್ಣಕ್ಕೆ ಹರಡಿಕೊಂಡಿದೆ. 2006ರಲ್ಲಿ ಪದವಿ ಪೂರ್ವ ಕಾಲೇಜು, 2009ರಲ್ಲಿ ಬಿಬಿಎಂ, ಬಿ.ಕಾಂ ಆರಂಭವಾಗಿದೆ. ಶ್ರೀರಾಮ ಶಿಶುಮಂದಿರದ ಶಾಖೆಗಳು ಬೊಂಡಾಲ, ಸಜಿಪ ಮೂಡ, ಬಿ.ಸಿ. ರೋಡ್, ಶಂಭೂರಿನಲ್ಲೂ ಆರಂಭವಾಗಿವೆ.

‘ಶಿಶುಮಂದಿರದಿಂದ ಪಿಯು ವರೆಗೆ 3,250 ಮಕ್ಕಳು ಕಲ್ಲಡ್ಕದಲ್ಲಿ ಓದುತ್ತಿದ್ದಾರೆ.  ವಿವೇಕಾನಂದ ವಿದ್ಯಾಸಂಸ್ಥೆ ಸೇರಿದಂತೆ ನಮ್ಮ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 18,000 ದಾಟುತ್ತದೆ’ ಎಂದು ಭಟ್ ಹೇಳುತ್ತಾರೆ.

ಭಾರತೀಯ ಮೌಲ್ಯ, ನೈತಿಕ ಶಿಕ್ಷಣ ನೀಡುವ ಧ್ಯೇಯದೊಂದಿಗೆ ಆರಂಭವಾದ ಶಾರದಾ ವಿದ್ಯಾಲಯಕ್ಕೆ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಅಧ್ಯಕ್ಷರು. ಎಲ್ ಕೆಜಿಯಿಂದ ಪಿಯು ಕಾಲೇಜುವರೆಗೆ ಕೊಡಿಯಾಲ್ ಬೈಲ್, ಮೂಡು ಶೆಡ್ಡೆಗಳಲ್ಲಿ ಶಾಲೆಗಳು ನಡೆಯುತ್ತಿದ್ದು, ಶಾರದಾ ಕಾಲೇಜು ಕೂಡ ಇದೆ. ಇಲ್ಲಿಯೂ 3,000ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಈಗ ಕೆಲವು ಸಂಘಟನೆಗಳು ಇಸ್ಲಾಮಿಕ್ ಕಾಲೇಜುಗಳು ಮತ್ತು ಶಾಲೆಗಳನ್ನು ಹುಟ್ಟು ಹಾಕಿವೆ. ಜಮಾತೇ ಇಸ್ಲಾಮಿ ಹಿಂದ್, ತಬ್ಲೀಗ್, ಸಮಸ್ತ ಕೇರಳ ಜಮೀಯತುಲ್ ಉಲೇಮಾ ಮುಂತಾದ ಸಂಸ್ಥೆಗಳು ಈ ಬಗೆಯ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದರ ಜೊತೆಗೆ ಮಸೀದಿಗಳ ಭಾಗವಾಗಿರುವ ಮದ್ರಸಾಗಳನ್ನು ನಿಯಂತ್ರಿಸುವುದಕ್ಕೂ ಮೇಲಾಟ ನಡೆಸುತ್ತಿವೆ. ಎರಡು ಮೂರು ದಶಕಗಳಿಂದ ಸೌದಿ ಅರೇಬಿಯಾದ ವಹಾಬಿ ಚಿಂತನೆಗಳಿಂದ ಪ್ರಭಾವಿತಗೊಂಡ ಸಲಫಿ ಪಂಗಡದವರ ಶಿಕ್ಷಣ ಸಂಸ್ಥೆಗಳೂ ಕರಾವಳಿಯಲ್ಲಿವೆ.

**

ಲವ್‌ ಜಿಹಾದ್‌ ಎಂಬ ಸಂಶಯ ಬಿತ್ತನೆ!

‘ಇಸ್ಲಾಮಿಕ್ ಜಿಹಾದಿಗಳು ಇಡೀ ದೇಶವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ನಮ್ಮ ಹುಡುಗಿಯರನ್ನು ಪ್ರೇಮದ ನೆಪದಲ್ಲಿ ಓಲೈಸಿಕೊಂಡು ವಿವಿಧ ಆಮಿಷ ಒಡ್ಡಿ ಮತಾಂತರ ಮಾಡುತ್ತಾರೆ. ಇದನ್ನು ನಾವು ಲವ್ ಜಿಹಾದ್ ಎಂದು ಕರೆಯುತ್ತೇವೆ. ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ’ ಎಂದು ಹಿಂದೂ ಜಾಗರಣಾ ವೇದಿಕೆಯ (ಹಿಂಜಾವೇ) ಮಾಜಿ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳುತ್ತಾರೆ. ಆದರೆ, ತಮ್ಮ ವಾದ ಸಮರ್ಥಿಸುವ ಅಂಕಿ ಅಂಶವನ್ನು ಅವರು ನೀಡುವುದಿಲ್ಲ.

ಅಂತಹ ಎಷ್ಟು ಪ್ರಕರಣಗಳಿವೆ ಎಂದು ಕೇಳಿದರೆ, ‘ಕೇರಳದ ಪೊನ್ನಾಣಿಯಲ್ಲಿ 3,000 ಹೆಣ್ಣು ಮಕ್ಕಳು ಇದ್ದಾರೆ. ಅಲ್ಲಿ ಮತಾಂತರದ ಕೆಲಸ ನಿರಂತರವಾಗಿ ನಡೆಯುತ್ತಿದೆ’ ಎಂದು ಸತ್ಯಜಿತ್ ಹೇಳುತ್ತಾರೆ. ‘ನಿಮ್ಮ ಬಳಿ ನಿಖರ ದಾಖಲೆ ಇದೆಯಾ’ ಎಂದರೆ, ‘ನಾವು ಹೇಳುತ್ತಿರುವುದು ಸತ್ಯ. ಸತ್ಯಜಿತ್ ಎಂದೂ ಸುಳ್ಳು ಹೇಳುವುದಿಲ್ಲ. ನೀವು ಬೇಕಾದರೆ ಪೊನ್ನಾಣಿಗೆ ಹೋಗಿ ನೋಡಿ’ ಎಂದು ಹೊಸ ಕತೆ ಬಿಚ್ಚಿಡುತ್ತಾರೆ.

ಇಂತಹ ಘಟನೆಗಳನ್ನು ಪದೇ ಪದೇಹೇಳುವ ಮೂಲಕ, ಮುಸ್ಲಿಂ ಹುಡುಗರೆಂದರೆ ಹಿಂದೂ ಹುಡುಗಿಯರನ್ನು ವಂಚಿಸುವವರು, ವಿದೇಶಕ್ಕೆ ಸಾಗಿಸುವವರು ಎಂಬ ಭಾವನೆಯನ್ನು ದಟ್ಟವಾಗಿ ಮೂಡಿಸಲಾಗಿದೆ. ಹೀಗೆ ಕತೆಗಳನ್ನು ಪೋಣಿಸಿ ಪೋಣಿಸಿ ಪದೇ ಪದೇ ಭಾಷಣಗಳಲ್ಲಿ ಹೇಳುವ ಬಜರಂಗದಳ, ಹಿಂಜಾವೇ ನಾಯಕರಿಂದಾಗಿ ಉಭಯ ಮತಗಳ ಯುವಕರಲ್ಲಿ ಪರಸ್ಪರ ಅನುಮಾನ, ದ್ವೇಷ ಹೆಚ್ಚಾಗಿದೆ ಎಂಬ ಡಿವೈಎಫ್ಐ ರಾಜ್ಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.

**

ಭೇದ ಹುಟ್ಟುಹಾಕಿದ ಕತೆ

ಪರಿಸ್ಥಿತಿ ಯಾಕೆ ಹೀಗೆ ಬದಲಾಯಿತು ಎಂಬ ಪ್ರಶ್ನೆಗೆ, ಡಿವೈಎಫ್ಐನ ರಾಜ್ಯ ಸಂಚಾಲಕ ಮುನೀರ್ ಕಾಟಿಪಳ್ಳ ಹಳೆಯ ನೆನಪಿಗೆ ಜಾರುತ್ತಾರೆ.

‘1992ರವರೆಗೂ ಎಲ್ಲವೂ ಚೆನ್ನಾಗಿತ್ತು. ಕೋಮು ಸೂಕ್ಷ್ಮ ಪ್ರದೇಶಗಳೆಂದು ಕರೆಯುವ ಕಾಟಿಪಳ್ಳ, ಕೃಷ್ಣಾಪುರ, ಕುಳಾಯಿ ಪ್ರದೇಶದಲ್ಲಿ ಹಿಂದೂ–ಮುಸ್ಲಿಂ ಹುಡುಗರು ಒಟ್ಟಿಗೆ ಆಟವಾಡುತ್ತಿದ್ದೆವು. ಬಾಬರಿ ಮಸೀದಿ ಧ್ವಂಸ ಮಾಡಿದ ದಿನವೂ ಅದೇ ರೀತಿ ಆಟ ಮುಂದುವರಿದಿತ್ತು. ಆಗೆಲ್ಲ ಟಿ.ವಿ.ಗಳು ಇರಲಿಲ್ಲ. ರೇಡಿಯೊ ಮಾತ್ರ ಸುದ್ದಿ ಹರಡುವ ಸಾಧನವಾಗಿತ್ತು. ಮಸೀದಿ ಉರುಳಿಸಿದ ಸುದ್ದಿ ಈ ಪ್ರದೇಶಕ್ಕೆ ತಲುಪಿದಾಗಲೂ ಒಂದೇ ಮೈದಾನದಲ್ಲಿ ಯಾವುದೇ ಸಂಶಯ, ದ್ವೇಷಗಳಿಲ್ಲದೇ ಹುಡುಗರೆಲ್ಲ ಬೆರೆತು ಸಂಭ್ರಮಿಸುತ್ತಿದ್ದರು. ಎಲ್ಲ ಮಸೀದಿಗಳ ಮೇಲೂ ದಾಳಿ ನಡೆಯುವ ಸಂಭವ ಇದೆ, ಧರ್ಮರಕ್ಷಣೆಗೆ ಯುವಕರು ಬದ್ಧರಾಗಬೇಕು ಎಂದು ಮುಸ್ಲಿಂ ಪ್ರಮುಖರು, ದೇವಸ್ಥಾನಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹಿಂದೂ ಪ್ರಮುಖರು ಎಚ್ಚರಿಸಿದರು. ಉಭಯ ಕೋಮಿನ ಹುಡುಗರು ತಮ್ಮ ಧರ್ಮಕೇಂದ್ರಗಳ ರಕ್ಷಣೆಗೆ ನಿಂತರು. ಮಾಮೂಲಿನಂತೆ ಯಾರೋ ಕಿಡಿಗೇಡಿಗಳು ಗಲಾಟೆ ಎಬ್ಬಿಸಿದರು. ಮಸೀದಿಗೆ ಬೆಂಕಿ ಹಾಕಲಾಯಿತು, ದೇವಸ್ಥಾನಕ್ಕೆ ಕಲ್ಲು ತೂರಲಾಯಿತು. ಎರಡು–ಮೂರು ದಿನ ಈ ಪ್ರದೇಶದಲ್ಲಿ ಉದ್ವಿಗ್ನತೆ ಇತ್ತು.

ಬರಬರುತ್ತಾ ಈ ಸಂಶಯ ದಟ್ಟವಾಗಿ, ವೈಷಮ್ಯಕ್ಕೆ ತಿರು
ಗಿತು. ಎಲ್ಲ ಸಮುದಾಯದವರಿದ್ದ ಕ್ರಿಕೆಟ್‌ ತಂಡ, ಓಂ ಶಕ್ತಿ ಕ್ರಿಕೆಟರ್ಸ್‌, ಶಿವಾಜಿ ಕ್ರಿಕೆಟರ್ಸ್‌, ಗ್ರೀನ್ ಸ್ಟಾರ್ಸ್‌ ಕ್ರಿಕೆಟರ್ಸ್‌, ಇಂಡಿಯನ್‌ ಕ್ರಿಕೆಟರ್ಸ್ ಎಂದು ವಿಭಜನೆಯಾಯಿತು. ಹಿಂದೂಗಳ ಮನೆಯ ಅಕ್ಕಪಕ್ಕ ಇದ್ದ ಮುಸ್ಲಿಮರು ತಮ್ಮವರು ಇರುವ ಕಡೆ, ಮುಸ್ಲಿಮರ ಮನೆಗಳ ಮಧ್ಯೆ ಹಿಂದೂಗಳು ತಮ್ಮವರು ಇರುವ ಕಡೆ ಮನೆಗಳನ್ನು ಬದಲಾಯಿಸಿದರು. ಸಮುದಾಯಗಳು ತಮ್ಮದೇ ಆದ ಕಡೆಗಳಿಗೆ ಕ್ರೋಡೀಕರಣಗೊಂಡರು. ಇದು ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು. ಶಿಕ್ಷಣ ಸಂಸ್ಥೆ
ಗಳು ತಲೆ ಎತ್ತಿದವು. ಹೀಗೆ ಭೇದ ಭಾವ ದಟ್ಟವಾಗುತ್ತಲೇ ಹೋಯಿತು’ ಎಂದು ಹೇಳುತ್ತಾ ಅವರು ನಿಟ್ಟುಸಿರಿಟ್ಟರು.

ನಾಳಿನ ಸಂಚಿಕೆಗೆ: ಉದ್ಯಮದ ಕತ್ತು ಹಿಸುಕುತ್ತಿರುವ ಕೋಮು ಸಂಘರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.