ADVERTISEMENT

ನೆನೆ ನೆನೆ, ಗೊಮ್ಮಟನ ನೆನೆ...

ಬಿ.ಪಿ.ಜಯಕುಮಾರ್‌
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ನೆನೆ ನೆನೆ, ಗೊಮ್ಮಟನ ನೆನೆ...
ನೆನೆ ನೆನೆ, ಗೊಮ್ಮಟನ ನೆನೆ...   

ವಿಂಧ್ಯಗಿರಿ (ಶ್ರವಣಬೆಳಗೊಳ): ಬೆಳಗೊಳದ ಜಿನರಿಗೆ ಮಳೆ ಬಂದರಭಿಷೇಕ, ಗುಡುಗು ಮಿಂಚುಗಳೇ ಕೈತಾಳ , ಜಿನರಿಗೆ ಹೊಳೆವ ನಕ್ಷತ್ರವೇ ಫಲಪುಂಜ – ಇದು, ಬೆಳಗೊಳದ ಗೊಮ್ಮಟೇಶನಿಗೆ ನಿಸರ್ಗ ಮಾಡುವ ಅಭಿಷೇಕದ ವರ್ಣನೆ ಕುರಿತ ಜನಪದರ ಹಾಡು. ಭಕ್ತರ ಅಭಿಷೇಕದ್ದು ಬೇರೆಯದೇ ರೀತಿ – ಅದು ವರ್ಣ ವೈಭವಗಳಿಂದ ಕೂಡಿರುವಂತಹದ್ದು. ಆದರೆ, ಈ ಅಭಿಷೇಕದಲ್ಲೂ ನಿಸರ್ಗವನ್ನು ಒಳಗೊಳ್ಳುವ ಪ್ರಯತ್ನದಂತೆ, ಬಾಹುಬಲಿಗೆ ಮಾಡಿದ ಎರಡನೆಯ ದಿನದ ಕಣ್ಮನ ಸೂರೆಗೊಂಡ ಅಭಿಷೇಕ ಕಾಣಿಸುತ್ತಿತ್ತು. 

ಭಾನುವಾರ ಬೆಳಗ್ಗೆಯಿಂದಲೇ ವಿಂಧ್ಯಗಿರಿಗೆ ಭಕ್ತರು ಶುದ್ಧ ವಸ್ತ್ರಧರಿಸಿ ಹತ್ತುತ್ತಿದ್ದ ದೃಶ್ಯ ಕಂಡುಬಂತು. ಬೆಳಗ್ಗೆ 8.30ಕ್ಕೆ ಪ್ರಾರಂಭವಾದ ಮಹಾಮಸ್ತಕಾಭಿಷೇಕ ಮಧ್ಯಾಹ್ನ 3 ಗಂಟೆಯವರೆಗೂ ನಡೆಯಿತು.

‘ಬಿಳಿ ಸೀರಿ ಉಡಬೇಕ, ಬೆಳಗೊಳಕ ಹೋಗಬೇಕ, ತಿಳಿಗೊಳದ ನೀರಾ ತರಬೇಕ, ಸ್ವಾಮಿಗೆ ಬೆಳ್ಳಂಬೆಳಗಾನ ಅಭಿಷೇಕ’… ಎಂದು ಜನಪದರು ಹಾಡಿದಂತೆ ಪ್ರಥಮವಾಗಿ ಶುದ್ಧ ಜಲದಿಂದ 1008 ಕಲಶಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಭಗವಂತನನ್ನು ಸಹಸ್ರನಾಮಗಳಿಂದ ಸ್ತುತಿಸುವಂತೆ ಜನ್ಮ, ಜರಾ, ಮೃತ್ಯುವಿನ ನಾಶದ ಉದ್ದೇಶದಿಂದ ಅಭಿಷೇಕ ಮಾಡಲಾಯಿತು.

ADVERTISEMENT

ಭಕ್ತರು ತಮ್ಮ ಕಳಶಗಳನ್ನು ಭಕ್ತಿಯಿಂದ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಅಭಿಷೇಕ ಮಾಡುವಾಗ ನೋಡುತ್ತಿದ್ದ ಜನಸ್ತೋಮ ಬಿಸಿಲನ್ನು ಲೆಕ್ಕಿಸದೆ ಜೈಕಾರಗಳ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿತ್ತು. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಜಲಾಭೀಷೇಕದ ನಂತರ ಪಂಚಾಮೃತ ಅಭಿಷೇಕವು ಪ್ರಾರಂಭವಾಯಿತು.       

ನಮ್ಮ ಆತ್ಮವೂ ಶುದ್ಧವಿರಲಿ ಎಂಬ ಭಾವನೆಯಿಂದ, ನೈಸರ್ಗಿಕವಾಗಿ ಶುದ್ಧವಾಗಿ ಇರುವ ಎಳನೀರನ್ನು ಭಗವಂತನಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕದ ನಂತರದ ಸರದಿ ಕಬ್ಬಿನ ಹಾಲಿನದು. ಕೊಡಗಳಿಂದ ನೆತ್ತಿಯ ಮೇಲೆ ಭುಜಗಳ ಮೇಲೆ ಹಾಕುವಾಗ ಭಗವಂತನು ಹಸಿರು ಬಣ್ಣಗಳಲ್ಲಿ ಮನೋಹರವಾಗಿ ಕಂಗೊಳಿಸುತ್ತಿದ್ದ. ಬಿಳಿಯ ಮುತ್ತಿನ ಮೂರ್ತಿಯಂತೆ ಕಂಗೊಳಿಸುತ್ತಿದ್ದುದು ಕ್ಷೀರಾಭಿಷೇಕ ಮಾಡುವ ಕ್ಷಣಗಳಲ್ಲಿ. ಗೊಮ್ಮಟನ ಮೈಮೇಲೆ ಸಾಗುತ್ತಾ ಪಾದದ ಬಳಿ ಬರಲು ಪ್ರತಿಯೊಂದು ಹನಿಯೂ ತಾಮುಂದು ತಾಮುಂದು ಎಂಬಂತೆ ಪೈಪೋಟಿ ನಡೆಸುತ್ತಿದ್ದವೇನೋ ಎಂಬಂತೆ ಕಾಣಿಸುತ್ತಿತ್ತು. ಭಕ್ತರು ಆ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾ, ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು.

ಯಾವುದೇ ಅಭಿಷೇಕವನ್ನಾಗಲೀ ಹತ್ತಿರದಿಂದ ನೋಡಬೇಕು ಎನಿಸುತ್ತದೆ. ಆದರೆ ಶ್ವೇತಕಲ್ಕ ಚೂರ್ಣದ ಅಭಿಷೇಕ ಮಾಡುವಾಗ ಮಾತ್ರ ದೂರದಿಂದ ನೋಡಬೇಕು. ಅಭಿಷೇಕ ಮಾಡುವಾಗ ಹಿಮ ಪರ್ವತದ ನಡುವೆ ಎದ್ದು ಬಂದಂತೆ ಕಾಣಿಸುತ್ತಿದ್ದ. ಅಭಿಷೇಕದ ನಂತರ ಯಾರೋ ಕಲೆಗಾರ ಪೆನ್ಸಿಲ್‌ನಿಂದ ಚಿತ್ರಿಸಿದ್ದಾನೋ ಎಂಬಂತೆ ಕಾಣಿಸುತ್ತಿತ್ತು.

ವಿಂಧ್ಯಗಿರಿಯ ಮೇಲೆ ಬಾಹುಬಲಿ ಚಿನ್ನದ ಪುತ್ಥಳಿಯಂತೆ ಕಾಣಿಸುತ್ತಿದ್ದು ಅರಿಶಿನದ ಅಭಿಷೇಕದಲ್ಲಿ. ನಮ್ಮಲ್ಲಿರುವ ಸರ್ವರೋಗಗಳ ನಿವಾರಣೆಗಾಗಿ ಮತ್ತು ನಮ್ಮಲ್ಲಿರುವ ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯ, ಲೋಭಗಳೆಂಬ ಕಷಾಯಗಳನ್ನು ದೂರಮಾಡಲು ಕಷಾಯ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಈ ಕಷಾಯದಲ್ಲಿ ಜಾಯಿಕಾಯಿ, ಲವಂಗ, ಏಲಕ್ಕಿ, ಅರಳಿ, ಮೊದಲಾದ ಔಷಧಿ ಸಸ್ಯಗಳನ್ನು ಕುದಿಸಿ, ಸೋಸಿ ಕಷಾಯ ತಯಾರಿಸಿ ಅಭಿಷೇಕದಲ್ಲಿ ಬಳಸಲಾಗಿತ್ತು. ನಂತರ ಕೇಸರಿ. ಶ್ರೀಗಂಧ, ಅಷ್ಟಗಂಧ, ಚಂದನ ಅಭಿಷೇಕ ನಡೆಯುವಾಗ ಬಾಹುಬಲಿಯು ಕ್ಷಣಕ್ಷಣಗಳಲ್ಲಿ ವಿವಿಧ ಬಣ್ಣಗಳಲ್ಲಿ ಹೊಳೆಯುತ್ತಿದ್ದ. ‘ಕೇಸರಿಯಾ ಕೇಸರಿಯಾ, ಬಾಹುಬಲಿ ಭಗವಾನ್‌ ಕೇಸರಿಯಾ’ ಎಂದು ಭಕ್ತರು ಸಂತೋಷದಿಂದ ನರ್ತಿಸುತ್ತಾ, ದಿವ್ಯ ಮೂರ್ತಿಯನ್ನು ತಮ್ಮ ಕಣ್ಣುಗಳ ಕ್ಯಾಮೆರಾಗಳಲ್ಲಿ ಹಿಡಿದಿಟ್ಟುಕೊಂಡರು.

ವಿಧ ವಿಧವಾದ ಪುಷ್ಪಗಳಿಂದ ವೃಷ್ಟಿ ಮಾಡಿದಾಗ ಹೂಗಳೂ ಗೊಮ್ಮಟನ ಪಾದದ ಬಳಿ ಬರಲು ತವಕಿಸುವ ಭಕ್ತರಂತೆ ಕಾಣುತ್ತಿದ್ದವು. ಕೆಲವು ಪುಷ್ಪಗಳಂತೂ ಮಸ್ತಕದಿಂದ ಇಳಿಯುವುದೇ ಇಲ್ಲ ಎಂಬಂತೆ ಅಲ್ಲೇ ಕುಳಿತಿದ್ದರೆ, ನಂತರ ಮಾಡಿದ ಶಾಂತಿಧಾರೆಯಿಂದ ಅವುಗಳೂ ಪಾದದ ಬಳಿ ಓಡೋಡಿ ಬರುವ ದೃಶ್ಯ ರಮಣೀಯವಾಗಿತ್ತು. ಕೊನೆಯದಾಗಿ, ದೊಡ್ಡ ಗೊಮ್ಮಟನಿಗೆ ದೊಡ್ಡ ಪುಷ್ಪಮಾಲೆಯನ್ನು ಅರ್ಪಿಸಿ ಸಂಗೀತದೊಂದಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಪಾದದ ಬಳಿ ಭಕ್ತರು ಗಂಧೋದಕವನ್ನು ತಮ್ಮ ಹಣೆಯ ಮೇಲೆ, ತಲೆಯ ಮೇಲೆ ಇಟ್ಟುಕೊಂಡು ತಮ್ಮ ಜೀವನ ಪಾವನವಾಯಿತು ಎಂದು ಧನ್ಯತಾ ಭಾವವನ್ನು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.