ADVERTISEMENT

ಕರ್ನಾಟಕ ಆಧಾರ್‌ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಸೇವೆ, ಅನುದಾನ, ಸಹಾಯಧನ, ಕೂಲಿ ಪಡೆಯಲು ಆಧಾರ್‌ ಕಡ್ಡಾಯಗೊಳಿಸುವ ಸಲುವಾಗಿ ತಂದಿರುವ ‘ಕರ್ನಾಟಕ ಆಧಾರ್‌ ಮಸೂದೆ 2018’ಕ್ಕೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿತು.

ಆಧಾರ್‌ ಕಡ್ಡಾಯ ಮಾಡುವುದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯ ಎಂದು ಮಸೂದೆ ಮಂಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ ವಿವರಿಸಿದರು.

ಸರ್ಕಾರ ಮತ್ತು  ಸರ್ಕಾರದ ಏಜೆನ್ಸಿಗಳ ಸೇವೆಗಳ ದಕ್ಷ ಮತ್ತು ಪಾರದರ್ಶಕ ನಿರ್ವಹಣೆ ಇದರಿಂದ ಸಾಧ್ಯ. ರಾಜ್ಯದಲ್ಲಿ ಶೇ 96 ರಷ್ಟು ನಾಗರಿಕರು ಆಧಾರ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ಉಳಿದ ಶೇ 4 ರಷ್ಟು ಜನರ ಆಧಾರ್‌ ಕಾರ್ಡ್‌ ಮಾಡಿಸಲು ಅಗತ್ಯವಿರುವ ವ್ಯವಸ್ಥೆ ಮಾಡಲಾಗಿದೆ. ವೃದ್ಧರು, ಅಂಗವಿಕಲರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವವರ ಮನೆಗೆ ಹೋಗಿ ಆಧಾರ್‌ ಕಾರ್ಡ್‌ ಮಾಡಿಸಲು ಆಧಾರ್‌ ಕಿಟ್‌ ವ್ಯವಸ್ಥೆ ಮಾಡಲಾಗುವುದು ಎಂದೂ ಅವರು ಭರವಸೆ ನೀಡಿದರು.

ADVERTISEMENT

ಈ ಮಸೂದೆಯಿಂದಾಗಿ ಕೇಂದ್ರದ ಸಂಚಿತ ನಿಧಿ ಬಳಸಿಕೊಳ್ಳುವುದಕ್ಕೂ ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.