ADVERTISEMENT

ವಿವಾದ ಸೃಷ್ಟಿಸಿದ ಎಡಿಜಿಪಿ ‌‘ಮತ’ ಟ್ವೀಟ್‌

‘ಶೇ 20ರಷ್ಟು ಮತ ಪಡೆದ ನಾಯಕರಿಂದ ದೇಶ ಹಾಳಾದೀತು’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:16 IST
Last Updated 20 ಏಪ್ರಿಲ್ 2019, 20:16 IST
ಭಾಸ್ಕರ್‌ ರಾವ್
ಭಾಸ್ಕರ್‌ ರಾವ್   

ಬೆಂಗಳೂರು: ‘ಮತ ಚಲಾಯಿಸಿ ದೇಶ ಕಟ್ಟಿ. ಇಲ್ಲವಾದರೆ, ಶೇ 20ರಷ್ಟು ಮತ ಪಡೆದ ‘ನಾಯಕ’ರಿಂದ (ದೇಶ) ಹಾಳಾದೀತು’ ಎಂದು ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಎಡಿಜಿಪಿ ಭಾಸ್ಕರ್‌ ರಾವ್ ಅವರು ಲೋಕಸಭಾ ಚುನಾವಣೆಯ ಮತದಾನದ ದಿನ (ಏ.18) ಮಾಡಿರುವ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ.

‘ಭಾಸ್ಕರ್ ರಾವ್ ಜೆಡಿಎಸ್ ಪಕ್ಷ ಹಾಗೂ ಅದರ ನಾಯಕರನ್ನು ಪರೋಕ್ಷವಾಗಿ ಅಣಕಿಸಿದ್ದಾರೆ. ಒಬ್ಬ ಸರ್ಕಾರಿ ಅಧಿಕಾರಿ ಈ ರೀತಿ ಟ್ವೀಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆಲ್ಲ ಕಾನೂನಿನಲ್ಲಿ ಅವಕಾಶವಿದೆಯಾ? ಇದು ತಪ್ಪಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಬಲಹೀನ ಸರ್ಕಾರವೇ ಇದು? ಚುನಾವಣಾ ಆಯೋಗವೇಕೆ ಕಣ್ಮುಚ್ಚಿ ಕುಳಿತಿದೆ’ ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ. ಇನ್ನೂ ಕೆಲವರು ಟ್ವೀಟ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಭಾಸ್ಕರ್‌ ರಾವ್, ‘ನಾನು ದುರುದ್ದೇಶಪೂರ್ವಕವಾಗಿ ಟ್ವೀಟ್ ಮಾಡಿರಲಿಲ್ಲ. ಮತ ಪ್ರಮಾಣ ಕಡಿಮೆಯಾದರೆ ಅದನ್ನೇ ಜನಾದೇಶ ಎಂದು ಭಾವಿಸುತ್ತಾರೆ. ಹೀಗಾಗಿ ಮತದಾನದಲ್ಲಿ ಜನ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲು ಯತ್ನಿಸಿದೆ ಅಷ್ಟೇ’ ಎಂದು ಸಮರ್ಥಿಸಿಕೊಂಡರು.

ADVERTISEMENT

‘ನಾನು ನೆಲೆಸಿರುವ ಬಸವನಗುಡಿ ಕ್ಷೇತ್ರದಲ್ಲಿ ಶೇ 49 ರಷ್ಟು ಮತದಾನವಾಗಿದೆ. ಅದರಲ್ಲಿ ಅತಿ ಹೆಚ್ಚು ಮತ ಪಡೆದವರೇ ಚುನಾಯಿತರಾಗುತ್ತಾರೆ. ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ನನ್ನ ಟ್ವೀಟನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ’ ಎಂದು ಹೇಳಿದರು.

ನಿಯಮ ಉಲ್ಲಂಘನೆ: ‘ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ನಾವೆಲ್ಲ ಚುನಾವಣಾ ಆಯೋಗದ ನಿಯಮಗಳ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕಾಗುತ್ತದೆ. ಸರ್ಕಾರಿ ನೌಕರರು ಅದರಲ್ಲೂ ಐಪಿಎಸ್ ಅಧಿಕಾರಿಯೊಬ್ಬರು ಈ ರೀತಿ ಸಂದೇಶ ಸಾರುವುದು ತಪ್ಪಾಗುತ್ತದೆ. ಕ್ರಮ ತೆಗೆದುಕೊಳ್ಳುವುದು, ಬಿಡುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅಗತ್ಯವಿರಲಿಲ್ಲ: ‘ಅಖಿಲ ಭಾರತ ಸೇವಾ ನಿಯಮ-1968ರ ಪ್ರಕಾರ ಸರ್ಕಾರಿ ಅಧಿಕಾರಿಗಳು ರಾಜಕೀಯ ಪಕ್ಷದ ಪರ ಪ್ರಚಾರ ಮಾಡುವುದು, ರಾಜಕೀಯ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವುದು, ರಾಜಕಾರಣಿಗಳ ಪರ ಕೆಲಸ ಮಾಡುವುದು ನಿಯಮ ಉಲ್ಲಂಘನೆ ಆಗುತ್ತದೆ. ಇಂತಹ ಒಂದು ಕಾನೂನೇ ಇರುವಾಗ, ಕಾನೂನು ಸುವ್ಯವಸ್ಥೆ ಕಾಪಾಡುವಂತಹ ಇಲಾಖೆಯಲ್ಲಿರುವ ಅಧಿಕಾರಿ, ಈ ರೀತಿ ಟ್ವೀಟ್ ಮಾಡುವ ಅಗತ್ಯವಿರಲಿಲ್ಲ’ ಎಂದು ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಿ ಆದರೂ ಅಷ್ಟೇ: ಐಪಿಎಸ್ ಅಧಿಕಾರಿಯಾದರೂ ಅಷ್ಟೆ. ಪ್ರಧಾನಿ ಆದರೂ ಅಷ್ಟೆ. ಮತದಾನದ ದಿನ ಮತ ಹಾಕುವುದಷ್ಟೇ ಅವರ ಕೆಲಸ. ಮತದಾರರ ಮೇಲೆ ಪ್ರಭಾವ ಬೀರುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಇನ್ನೊಬ್ಬ ಅಧಿಕಾರಿ ಹೇಳಿದರು.

ಎಡಿಜಿಪಿ ಟ್ವೀಟ್‌ಗೆ‍ಪ್ರತಿಕ್ರಿಯೆಗಳು

ಸರ್ಕಾರಿ‌ ನೌಕರರಾಗಿ ಒಂದು ಪಕ್ಷದ ಪರ ಟ್ವೀಟ್ ಮಾಡ್ತಿದೀರಾ? ಎಲೆಕ್ಷನ್ ಕಮಿಷನ್‌ಗೆ ನಾನೇ ದೂರು‌ ಕೊಡ್ತೀನಿ. ಅನುಭವಿಸಿ..

– ರವಿರಾಜ್,ಬಳ್ಳಾರಿ

ಸಿ.ಎಂ ಕಡೆಗೇ ಬೊಟ್ಟು ಮಾಡಿ ಮಾತನಾಡಿರುವುದು ಸ್ಪಷ್ಟ. ಅವರ ವಿರುದ್ಧ ಯಾಕೆ ಷೋಕಾಸ್ ನೋಟಿಸ್ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಬಾರದು

– ಸನ್‌ಸ್ಕಾರಿ,ಆಸ್ಟ್ರೋನಟ್

ಐಪಿಸಿ ಅಧಿಕಾರಿಯಾಗಿ ಈ ರೀತಿ ಹೇಳಿಕೆಗಳನ್ನು ನೀಡುವ ಬದಲು, ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯ ಪಕ್ಷವನ್ನು ಸೇರಿಬಿಡಿ

– ಪ್ರಶಾಂತ್‌ ಗೌಡ

ಸರ್, ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನಿಜವಾಗಿಯೂ ಇದು ನಿಮ್ಮ ಅಧಿಕೃತ ಟ್ವಿಟರ್ ಖಾತೆಯಾ?

– ದರ್ಶನಾ ರಾಮದೇವ್

ಬೆಂಗಳೂರಿನಲ್ಲಿ ಶೇ 50ರಷ್ಟು ಮತದಾನವಾಗಿದೆ. ಈ ‘ಸತ್’ ಪ್ರಜೆಗಳಿಗೆ ಏನು ಹೇಳೋದು ಸಾಹೇಬ್ರೆ? ತಾವುಗಳು ತಿಂಗಳಿನಿಂದ ಜಾಗೃತಿ ಮೂಡಿಸುತ್ತಿದ್ದರೂ, ಇವರೆಲ್ಲ ಸತ್ತಪ್ರಜೆ ಆಗಿಬಿಟ್ರು

– ಮೋಹನ್‌ ಕುಮಾರ್ ದಾನಪ್ಪ

ನೀವು ಇನ್ನೂ ಸೇವೆಯಲ್ಲಿರುವ ಅಧಿಕಾರಿನಾ?

– ಎ.ಪಿ.ಪ್ರಮೋದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.