ADVERTISEMENT

ರಾಜೀನಾಮೆ ಬಳಿಕ ನಿರುಮ್ಮಳವಾಗಿ ಕುಟುಂಬದೊಂದಿಗೆ ದಿನ ಕಳೆದ ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:41 IST
Last Updated 27 ಜುಲೈ 2021, 2:41 IST

ಬೆಂಗಳೂರು: ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ಬಿ.ಎಸ್‌. ಯಡಿಯೂರಪ್ಪ, ನಂತರ ನೇರವಾಗಿ ಮನೆಗೆ ತೆರಳಿದರು. ಇಡೀ ದಿನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಇದ್ದ ಅವರು, ಪದತ್ಯಾಗದ ಬೇಸರವನ್ನು ತೋರಿಸಿಕೊಳ್ಳದಂತೆ ಎಲ್ಲರೊಂದಿಗೂ ನಗುತ್ತಲೇ ಮಾತನಾಡುತ್ತಾ ಕಾಲ ಕಳೆದರು.

ರಾಜೀನಾಮೆ ಸಲ್ಲಿಸಿ ತೆರಳುತ್ತಿದ್ದ ಅವರನ್ನು ನಿರ್ಗಮಿತ ಸಂಪುಟದ ಸದಸ್ಯರು, ಹಲವು ಶಾಸಕರು ಹಿಂಬಾಲಿಸಿದರು. ಮನೆ ತಲುಪಿದ ಬಳಿಕ ಎದುರಿನ ಮೊಗಸಾಲೆಯಲ್ಲೇ ಕುಳಿತ ಯಡಿಯೂರಪ್ಪ, ಕೆಲಕಾಲ ಎಲ್ಲರೊಂದಿಗೆ ಮಾತುಕತೆ ನಡೆಸಿದರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ ಸೇರಿದಂತೆ ಹಲವು ಸಚಿವರು, ಶಾಸಕರು ಇದ್ದರು.

‘ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ಮಂದಿ ಬಿಜೆಪಿ ಮುಖಂಡರು ಸಂಜೆಯವರೆಗೂ ಯಡಿಯೂರಪ್ಪ ಅವರನ್ನು ಭೇಟಿಮಾಡಿದರು. ‘ರಾಜೀನಾಮೆಯಿಂದ ನಮಗೆ ನೋವಾಗಿದೆ’ ಎಂದು ಕೆಲವು ಮುಖಂಡರು ಬೇಸರ ವ್ಯಕ್ತಪಡಿಸಿದರು. ಎಲ್ಲರನ್ನೂ ಸಮಾಧಾನಿಸಿದ ಯಡಿಯೂರಪ್ಪ, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವುದಾಗಿ ಭರವಸೆ ನೀಡಿ ಕಳುಹಿಸಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಹೋಟೆಲ್‌ನಲ್ಲಿ ಊಟ: ಯಡಿಯೂರಪ್ಪ ಅವರ ಕುಟುಂಬದ ಬಹುತೇಕ ಸದಸ್ಯರು ಸೋಮವಾರ ಕಾವೇರಿಯಲ್ಲೇ ಇದ್ದರು. ರಾತ್ರಿ ಕುಟುಂಬದ ಸದಸ್ಯರೊಂದಿಗೆ ಹೋಟೆಲ್‌ಗೆ ತೆರಳಿದ್ದ ಯಡಿಯೂರಪ್ಪ, ಅಲ್ಲಿಯೇ ಊಟ ಮುಗಿಸಿ ಮನೆಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.