ADVERTISEMENT

‘ಖಾಸಗಿ ವೈದ್ಯ ಕಾಲೇಜುಗಳ ಲಾಬಿಗೆ ಸರ್ಕಾರ ಮಣಿಯದಿರಲಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 17:00 IST
Last Updated 22 ಅಕ್ಟೋಬರ್ 2021, 17:00 IST

ಬೆಂಗಳೂರು: ‘ರಾಜ್ಯ ಸರ್ಕಾರವು ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಲಾಬಿಗೆ ಮಣಿಯದೆ ವಿದ್ಯಾರ್ಥಿಗಳ ಹಿತ ಕಾಯಬೇಕು’ ಎಂದುಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ರಾಜ್ಯ ಘಟಕದ ಕಾರ್ಯದರ್ಶಿಅಜಯ್ ಕಾಮತ್ ಒತ್ತಾಯಿಸಿದ್ದಾರೆ.

‘ಸರ್ಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿ ಜೊತೆ ಸಂಪೂರ್ಣವಾಗಿ ಶಾಮೀಲಾಗಿದೆ. ಹೀಗಾಗಿ ಕಾಲೇಜುಗಳು ಪ್ರತಿ ವರ್ಷವೂ ಶುಲ್ಕ ಏರಿಕೆ ಮಾಡುತ್ತಲೇ ಇದೆ. ಈ ವರ್ಷವೂ ಆಡಳಿತ ಮಂಡಳಿಗಳು ಶೇ 25ರಿಂದ ಶೇ 30ರಷ್ಟು ಶುಲ್ಕ ಏರಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿವೆ. ಇದು ಪ್ರಜಾತಂತ್ರವಿರೋಧಿ ಕ್ರಮ’ ಎಂದು ತಿಳಿಸಿದ್ದಾರೆ.

‘ವೈದ್ಯಕೀಯ ಶಿಕ್ಷಣ ಸಾಕಷ್ಟು ದುಬಾರಿಯಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಕೈಗೆಟಕದಂತಾಗಿದೆ. ಪ್ರತಿ ವರ್ಷವೂ ಶುಲ್ಕ ಏರಿಕೆಯಾಗುತ್ತಲೇ ಹೋದರೆ ಆರೋಗ್ಯ ವಲಯ ಖಾಸಗೀಕರಣಗೊಳ್ಳುತ್ತದೆ. ಇದರಿಂದ ಬಡವರು ಆರೋಗ್ಯ ಸೇವೆಯಿಂದ ವಂಚಿತರಾಗಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಿ ವೈದ್ಯಕೀಯ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಸೇವಾ ಮನೋಭಾವವನ್ನೇ ಮರೆತುಬಿಡುತ್ತಾರೆ. ಅವರು ರೋಗಿಗಳನ್ನು ಗ್ರಾಹಕರಂತೆ ಕಾಣುವ ಅಪಾಯವಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕೋವಿಡ್‌ನಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ವಿದ್ಯಾರ್ಥಿಗಳ ಶುಲ್ಕ ರದ್ದುಗೊಳಿಸಬೇಕಿತ್ತು. ವಿದ್ಯಾರ್ಥಿವೇತನ ಹೆಚ್ಚಿಸಬೇಕಿತ್ತು. ಶುಲ್ಕದ ವಿಚಾರವಾಗಿ ನಿರ್ಧಾರ ಕೈಗೊಳ್ಳುವಾಗ ಏಕಪಕ್ಷೀಯ ಧೋರಣೆ ತಳೆಯದೆ, ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರ ಜೊತೆಗೂ ಚರ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.