ADVERTISEMENT

ಕಾರ್ಮಿಕ ಕಾಯ್ದೆ ತಿದ್ದುಪಡಿ: ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ಮೇ 2020, 23:17 IST
Last Updated 21 ಮೇ 2020, 23:17 IST
ಯಡಿಯೂರಪ್ಪ
ಯಡಿಯೂರಪ್ಪ   

ಬೆಂಗಳೂರು: ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆ ಕುರಿತು ಉದ್ಯಮಿಗಳು ಸಲ್ಲಿಸಿರುವ ಬೇಡಿಕೆಗಳ ಕುರಿತ ಮಾಹಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಂದ ಪಡೆದರು.

ಗುರುವಾರ ನಡೆದ ಕೈಗಾರಿಕಾ ಇಲಾಖೆಯ ಸಭೆಯಲ್ಲೇ ಈ ಮಾಹಿತಿ ಪಡೆದ ಅವರು, ತಿದ್ದುಪಡಿ ಸಂಬಂಧ ಯಾವುದೇ ನಿರ್ಣಯವನ್ನು ಅವರು ತೆಗೆದುಕೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಬಂಡವಾಳವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಹಾಯಕವಾಗಲು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಬಯಸಿದೆ. ಉತ್ತರಪ್ರದೇಶ ಸೇರಿ ಕೆಲವು ರಾಜ್ಯಗಳು ಇತ್ತೀಚೆಗೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದಿವೆ. ರಾಜ್ಯದಲ್ಲೂ ಅದೇ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿದರೆ, ಹೆಚ್ಚು ಬಂಡವಾಳ ಬರಬಹುದು ಎಂದು ಸರ್ಕಾರದ ಲೆಕ್ಕಾಚಾರ.

ADVERTISEMENT

ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ವಿರೋಧಿಸಿವೆ. ವಿವಿಧ ಕಾರ್ಮಿಕ ಸಂಘಟನೆಗಳೂ ಪ್ರತಿರೋಧ ವ್ಯಕ್ತಪಡಿಸಿವೆ. ‘ಆದರೂ ಸರ್ಕಾರ ತಾನು ಇಟ್ಟಿರುವ ಹೆಜ್ಜೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇಲ್ಲ’ ಎಂದು ಮೂಲಗಳು ಹೇಳಿವೆ.

ಕಾರ್ಮಿಕರ ನೋಂದಣಿಗೆ ಸಿಎಂ ಸೂಚನೆ: ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಈಗ ಕೇವಲ 89 ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಈ ವಲಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಅಭಿಯಾ
ನದ ಮಾದರಿಯಲ್ಲಿ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನೋಂದಣಿ ಮಾಡಿಸದಿದ್ದರೆ ಕಾರ್ಮಿಕ ಸಿಗಬೇಕಾದ ಪರಿಹಾರ ಧನವೂ ಸೇರಿ ಹಲವು ರೀತಿಯ ಪ್ರಯೋಜನಗಳಿಂದ ವಂಚಿತರಾಗಬಹುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ನೋಂದಾಯಿಸುವ ಕಾರ್ಯ ಕೈಗೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.