ADVERTISEMENT

ಕುಲಪತಿ ಹುದ್ದೆಗಳಿಗೆ ಎಸ್‌ಸಿ ವಿದ್ವಾಂಸರ ನೇಮಕ ಮಾಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 10:19 IST
Last Updated 24 ಜುಲೈ 2020, 10:19 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಮತ್ತು ಖಾಲಿ ಆಗುವ ಕುಲಪತಿಗಳ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ದಮನಿತ ವರ್ಗಗಳ ವಿದ್ವಾಂಸರನ್ನೇ ಸಾಮಾಜಿಕ ನ್ಯಾಯದ ಆಧಾರದ ಮೇಲೆ ನೇಮಕ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಅವರು ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000 ರ ಅಡಿ ಪರಿಶಿಷ್ಟ ಜಾತಿ ಮತ್ತು ದಮನಿತ ವರ್ಗಗಳವರಿಗೆ ನೇಮಕ ಮಾಡಬಹುದು. ಅದೇ ರೀತಿ ಕೆಪಿಎಸ್‌ಸಿ ಮುಂತಾದ ಸಂವಿಧಾನದ ಸಂಸ್ಥೆಗಳಲ್ಲೂ ಖಾಲಿ ಇರುವ ಮತ್ತು ಖಾಲಿ ಆಗುವ ಹುದ್ದೆಗಳಿಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಈಗ ವರ್ಗಗಳಿಗೆ ಸೇರಿದವರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ 25 ವಿಶ್ವವಿದ್ಯಾಲಯಗಳಲ್ಲಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಬಿಟ್ಟು ಉಳಿದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಲಪತಿಗಳಿಲ್ಲ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಸೆಕ್ಷನ್‌ 14(4) ರ ಪ್ರಕಾರ ಸಾಮಾಜಿಕ ನ್ಯಾಯ ಕಡ್ಡಾಯವಾಗಿ ಅನುಸರಿಸದೇ ಇರುವುದು ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

‘ಸಾಲು ಮರದ ತಿಮ್ಮಕ್ಕ ಮತ್ತು ಕರ್ನಾಟಕ ಮಾನವ ಧರ್ಮಪೀಠ ಸಭಾದ ಸ್ವಾಮೀಜಿ ನನ್ನನ್ನು ಭೇಟಿ ಮಾಡಿ ಈ ಅಂಶವನ್ನು ನನ್ನ ಗಮನಕ್ಕೆ ತಂದಿದ್ದಾರೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.