ADVERTISEMENT

ಸೇನಾ ನರ್ಸಿಂಗ್‌: ಶೇ 100ರ ಮಹಿಳಾ ಮೀಸಲು ಕಾನೂನು ರದ್ದು

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 17:10 IST
Last Updated 11 ಜನವರಿ 2024, 17:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಭಾರತೀಯ ಸೇನೆಯಲ್ಲಿ ನರ್ಸಿಂಗ್ ಹುದ್ದೆಗಳನ್ನು ಸಂಪೂರ್ಣವಾಗಿ ಮಹಿಳೆಯರಿಗೇ ಮೀಸಲು ಇರಿಸುವ ನಿಟ್ಟಿನಲ್ಲಿ, ಭಾರತೀಯ ಮಿಲಿಟರಿ ನರ್ಸಿಂಗ್ ಸೇವೆಗಳ ಸುಗ್ರೀವಾಜ್ಞೆ-1943ರ ಕಲಂ 6ರಲ್ಲಿ ಬಳಕೆ ಮಾಡಲಾಗಿದ್ದ ‘ಮಹಿಳೆಯಾಗಿದ್ದರೆ’ ಎಂಬ ಪದವನ್ನು ಹೈಕೋರ್ಟ್‌, ಅಸಾಂವಿಧಾನಿಕ ಎಂದು ಘೋಷಿಸಿದೆ.

ಈ ಸಂಬಂಧ ಹುಬ್ಬಳ್ಳಿಯಲ್ಲಿರುವ ‘ಕರ್ನಾಟಕ ಲಿಂಗಾಯತ ವಿದ್ಯಾಸಂಸ್ಥೆ’ಯ (ಕೆಎಲ್‌ಇಎಸ್‌) ನರ್ಸಿಂಗ್‌ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಸಂಜಯ ಎಂ.ಪೀರಾಪುರ, ಬೋಧಕ ಶಿವಪ್ಪ ಮಾರನಬಸರಿ ಮತ್ತು ‘ಕರ್ನಾಟಕ ಶುಶ್ರೂಷಕರ ಸಂಘ’ದ ಕಾರ್ಯದರ್ಶಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಭಾಗಶಃ ಪುರಸ್ಕರಿಸಿದೆ.

‘ಈ ರೀತಿಯ ಮೀಸಲಾತಿ ನೀಡುವುದು ಸಂವಿಧಾನದ 14ನೇ ವಿಧಿ, (ಸಮಾನತೆ), 16 (2)(ಲಿಂಗ ತಾರತಮ್ಯ)ನೇ ವಿಧಿ ಹಾಗೂ 21ನೇ ವಿಧಿಗಳನ್ನು (ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಿದಂತೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ  81 ವರ್ಷಗಳ ಹಳೆಯ ಕಾನೂನನ್ನು ರದ್ದುಗೊಳಿಸಿದೆ.

ADVERTISEMENT

‘ಸ್ವಾಂತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಸೇನೆಗೆ ಸೇರಲು ಹಿಂಜರಿಯುತ್ತಿದ್ದರು. ಹಾಗಾಗಿ, ಅವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅವರಿಗಾಗಿಯೇ ಪ್ರತ್ಯೇಕವೆಂದು ಶೇ 100ರ ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, 1943ರಲ್ಲಿ ಇದ್ದಂತಹ ಪರಿಸ್ಥಿತಿ ಈಗಿಲ್ಲ. ಸಕಾರಣಗಳಿಲ್ಲದೆ ಮಹಿಳೆಯರಿಗೆ ಶೇ 100ರಷ್ಟು ಅವಕಾಶ ನೀಡಿದಲ್ಲಿ ಮೀಸಲಾತಿಯ ಕಲ್ಪನೆಯನ್ನೇ ಅಂತ್ಯಗೊಳಿಸಿದಂತಾಗುತ್ತದೆ. ಅಂತೆಯೇ, ಮೀಸಲು ಸೌಲಭ್ಯದಿಂದ ಪುರುಷರನ್ನು ಪ್ರತ್ಯೇಕಿಸಿದಂತಾಗಲಿದೆ’ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ಶುಶ್ರೂಷಕಿಯರ ನೇಮಕಾತಿಗೆ ಸಂಬಂಧಿಸಿದಂತೆ ಭಾರತೀಯ ಸೇನೆ 2010ರ ಫೆಬ್ರುವರಿ 13 ಮತ್ತು 19ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯಲ್ಲಿ ‘ಮಹಿಳೆಯರಿಗೆ’ ಮಾತ್ರ ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.