ADVERTISEMENT

ಲಿಂಗಾಯತ–ಒಕ್ಕಲಿಗರನ್ನು ಒಡೆದ ಜಾತಿಗಣತಿ: ಆರ್‌.ಅಶೋಕ

ವರದಿ ತಿರಸ್ಕರಿಸಿ ಹೊಸ ಗಣತಿ ನಡೆಸಲು ಆರ್‌.ಅಶೋಕ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:54 IST
Last Updated 13 ಏಪ್ರಿಲ್ 2025, 15:54 IST
 ಆರ್. ಅಶೋಕ 
 ಆರ್. ಅಶೋಕ    

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಸಿರುವ ಜಾತಿಗಣತಿಯಲ್ಲಿ ಒಕ್ಕಲಿಗರು, ಲಿಂಗಾಯತರನ್ನು ಒಡೆಯುವ ಪ್ರಯತ್ನ ನಡೆದಿದೆ. ಮುಸ್ಲಿಮರನ್ನು ಅತಿ ದೊಡ್ಡ ಒಂದು ಜಾತಿ ಎಂದು ಪರಿಗಣಿಸಲಾಗಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ದೂರಿದ್ದಾರೆ.

‘ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್‌ ಆಗಿ ಮಾಡಿಕೊಳ್ಳಲು ಸಿದ್ದರಾಮಯ್ಯ ಜಾತಿ ಗಣತಿ ಮಾಡಿಸಿದ್ದಾರೆ. ಅಚ್ಚರಿ ಎಂದರೆ, ಹಿಂದೂಗಳಲ್ಲಿ ಸಾಕಷ್ಟು ಜಾತಿಗಳ ಗಣತಿಯನ್ನೇ ಮಾಡಿಲ್ಲ. ಆದ್ದರಿಂದ, ಈ ವರದಿಯನ್ನು ಹಿಂದಕ್ಕೆ ಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ, ನಿಖರವಾಗಿ ಮಾಹಿತಿ ಸಂಗ್ರಹಿಸಿ, ವೈಜ್ಞಾನಿಕ ವರದಿ ರೂಪಿಸಬೇಕು’ ಎಂದು ಅವರು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ ಆಗ್ರಹಿಸಿದರು.

‘ಸಿದ್ದರಾಮಯ್ಯ ಜಾತಿ, ಧರ್ಮಗಳನ್ನು ಒಡೆಯುವ ಕೆಲಸವನ್ನು ಜಾತಿಗಣತಿ ಮೂಲಕ ಯಶಸ್ವಿಯಾಗಿ ಮಾಡಿಸಿದ್ದಾರೆ. ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು, ಮೂರನೆಯವರು ದಲಿತರು ಎಂದಿತ್ತು. ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೂ ಹಲವು ಜಾತಿಗಳಿದ್ದರೂ ಬೇರೆ ಮಾಡಿಲ್ಲ. ಒಕ್ಕಲಿಗರಲ್ಲಿ ಕೆಲವು ಜಾತಿಗಳನ್ನು ವಿಂಗಡಿಸಲಾಗಿದೆ. ಕಾಂಗ್ರೆಸ್‌ಗೆ ಹೆಚ್ಚು ಮತ ನೀಡುವ ಜಾತಿಗಳ ಸಂಖ್ಯೆಯನ್ನು ಮಾತ್ರ ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ ಮತ್ತು ದಲಿತರಿಗೆ ನಾಮ ಹಾಕಿದ್ದಾರೆ’ ಎಂದು ಅಶೋಕ ಟೀಕಿಸಿದರು.

ADVERTISEMENT

‘ಸಿದ್ದರಾಮಯ್ಯ ಪ್ರಾಯೋಜಿತ ಈ ವರದಿ ಅವೈಜ್ಞಾನಿಕ. ಲಕ್ಷಾಂತರ ಮನೆಗಳಿಗೆ ಹೋಗದೇ ವರದಿ ಬರೆಯಲಾಗಿದೆ. ಕರ್ನಾಟಕ ತಂತ್ರಜ್ಞಾನದಲ್ಲೇ ನಂ 1 ಆಗಿದೆ. ಇದನ್ನು ಬಳಸಿ ವರದಿ ತಯಾರಿಸಬಹುದಿತ್ತು. ತಮ್ಮ ಇಚ್ಛೆಗೆ ಅನುಗುಣವಾಗಿ ವರದಿ ಬರೆಸಿಕೊಂಡಿದ್ದಾರೆ’ ಎಂದರು.

‘ಕಾಂಗ್ರೆಸ್‌ ಪಕ್ಷ ಒಕ್ಕಲಿಗರು ಮತ್ತು ಲಿಂಗಾಯತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಈಗಲೂ ಸಮಯವಿದೆ. ಆರು ತಿಂಗಳು ತಡವಾದರೂ ಪರವಾಗಿಲ್ಲ. ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವರದಿಯನ್ನು ರೂಪಿಸಲಿ’ ಎಂದು ಅವರು ಆಗ್ರಹಿಸಿದರು.

‘ಹಳ್ಳಿಕಾರ್, ಕುಂಚಿಟಿಗರನ್ನು ಒಕ್ಕಲಿಗರಿಂದ ಬೇರೆ ಮಾಡಲಾಗಿದೆ. ರಡ್ಡಿ ಲಿಂಗಾಯತರನ್ನು ಪ್ರತ್ಯೇಕಿಸಲಾಗಿದೆ. ಇಂತಹ ವರದಿಯನ್ನು ಸಚಿವರು ಒಪ್ಪಿ ಕೊಂಡಿರಬಹುದು. ಆದರೆ, ಆಯಾ ಸಮುದಾಯದ ಜನರು ಒಪ್ಪುವುದಿಲ್ಲ. ಈ ವರದಿಯಿಂದ ಕಾಂಗ್ರೆಸ್‌ನಲ್ಲೇ ದಂಗೆ ಆರಂಭವಾಗಲಿದೆ. ಸಮುದಾಯದ ಜನರು ಮುಂದಿನ ಚುನಾವಣೆಯಲ್ಲಿ ಹತ್ತಿರ ಸೇರಿಸುವುದಿಲ್ಲ. ಒಕ್ಕಲಿಗ ಸ್ವಾಮೀಜಿಯವರು ಸಭೆ ಕರೆದು ಚರ್ಚೆ ಮಾಡಲಿದ್ದಾರೆ. ಇದೇ ರೀತಿ ಬೇರೆ ಸಮುದಾಯದವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

ಡಾ.ಬಿ.ಆರ್‌. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡಿದ್ದಾರೆ. ಆದರೆ, ಮುಸ್ಲಿಮರಿಗೆ ಮೀಸಲಾತಿ ನೀಡಲು ರಾಜ್ಯಕ್ಕೆ ಅಧಿಕಾರವಿಲ್ಲ. ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರುವಂತಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ. ಹೆಚ್ಚಿನ ಮೀಸಲಾತಿ ಯಾವ ಕಾನೂನಿನಡಿ ನೀಡಲಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಒತ್ತಾಯಿಸಿದರು.

 ವಿ.ಸೋಮಣ್ಣ

ಸಿದ್ದರಾಮಯ್ಯಗೆ ಮರಣ ಶಾಸನ: ವಿ.ಸೋಮಣ್ಣ ‘ಜಾತಿ ಜನಗಣತಿ ಸಿದ್ದರಾಮಯ್ಯ ಅವರಿಗೆ ಮರಣ ಶಾಸನ ಆಗಲಿದೆ. ಆದ್ದರಿಂದ ವರದಿಯನ್ನು ತಿರಸ್ಕರಿಸಬೇಕು’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಆಗ್ರಹಿಸಿದ್ದಾರೆ. ‘ಕುರ್ಚಿ ಉಳಿಸಿಕೊಳ್ಳಲು ಸಿ.ಎಂ ವರದಿಯ ಜಾರಿಗೆ ಮುಂದಾಗಿದ್ದಾರೆ. ವರದಿ ಕಾಗಕ್ಕ ಗೂಬಕ್ಕ ಕತೆಯಂತಿದೆ. ಇದು ಜಾರಿಯಾದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯ ಖಳನಾಯಕರಾಗುತ್ತಾರೆ’ ಎಂದರು. ‘ಅವೈಜ್ಞಾನಿಕ ತಪ್ಪು ಮಾಹಿತಿಗಳ ಈ ವರದಿಯನ್ನು ಹಿಂದೆ ಪಡೆಯಬೇಕು. ಒಬ್ಬ ವ್ಯಕ್ತಿ ಬಿಡದೇ ಎಲ್ಲರನ್ನೂ ಒಳಗೊಂಡ ಸಮೀಕ್ಷೆ ಮಾಡಬೇಕು. ಇಲ್ಲವಾದರೆ ಜನ ಸಾಮಾನ್ಯರು ಶಾಪ ಹಾಕುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.