ADVERTISEMENT

ನಡುರಸ್ತೆಯಲ್ಲಿಯೇ ಮಗು ಜನನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2019, 19:28 IST
Last Updated 8 ಜನವರಿ 2019, 19:28 IST

ಚಿತ್ರದುರ್ಗ: ಆರೋಗ್ಯ ಕೇಂದ್ರದಿಂದ ಮನೆಗೆ ಮರಳುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ನಡು ರಸ್ತೆಯಲ್ಲಿಯೇ ಶಿಶುವಿಗೆ ಜನ್ಮ ನೀಡಿದ್ದಾರೆ.

ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆರಿಗೆಯ ಬಳಿಕ ಬಾಣಂತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಾಯಿ ಮತ್ತು ಹೆಣ್ಣು ಶಿಶು ಆರೋಗ್ಯವಾಗಿದ್ದಾರೆ.

ಗಂಗಮಾಳಮ್ಮ ಅವರು ವೈದ್ಯರನ್ನು ಕಾಣಲು ಅವರು ಚಿತ್ರಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಗರ್ಭಿಣಿಯ ಆರೋಗ್ಯ ಪರಿಶೀಲಿಸದೆ ವೈದ್ಯ ಡಾ.ಮೊಹಮ್ಮದ್‌ ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ಇದರಿಂದ ಬೇಸರಗೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ.

ADVERTISEMENT

ನಡುರಸ್ತೆಯಲ್ಲಿಯೇ ಕುಳಿತುಕೊಂಡು ಕಿರುಚಿಕೊಂಡಿದ್ದಾರೆ. ಸಮೀಪದಲ್ಲಿದ್ದ ಮಹಿಳೆಯರು ಧಾವಿಸಿ ಪರಿಶೀಲಿಸಿದಾಗ ಶಿಶುವಿನ ತಲೆ ಗರ್ಭದಿಂದ ಹೊರಗೆ ಬಂದಿದ್ದು ಗೊತ್ತಾಗಿದೆ. ಮಣ್ಣಿನ ರಸ್ತೆಯಲ್ಲಿ ಮಲಗಿದ ಗರ್ಭಿಣಿಯ ಸುತ್ತ ಸೀರೆಯ ಪರದೆ ನಿರ್ಮಿಸಿ ಹೆರಿಗೆಗೆ ಆಸರೆಯಾಗಿದ್ದಾರೆ. ಬಳಿಕ 108 ಆಂಬುಲೆನ್ಸ್‌ನಲ್ಲಿ ಅವರನ್ನು ಹೊರಕೆರೆಪುರದ ಆಸ್ಪತ್ರೆಗೆ ಸಾಗಿಸಲಾಗಿದೆ.

‘ವೈದ್ಯರ ನಿರ್ಲಕ್ಷ್ಯದಿಂದ ಈ ಲೋಪ ಆಗಿರುವುದು ನಿಜ. ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ವೈದ್ಯರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಶಿಫಾರಸು ಮಾಡಿದ್ದೇನೆ’ ಎಂದು ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.