ADVERTISEMENT

ನವಲಿ ಗ್ರಾಮದ ಬಳಿ ಸಮತೋಲನಾ ಜಲಾಶಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:15 IST
Last Updated 12 ಫೆಬ್ರುವರಿ 2019, 20:15 IST

ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಕೊರತೆ ಉಂಟಾದ ನೀರಿನ ಸಂಗ್ರಹಣಾ ಸಾಮರ್ಥ್ಯ ಸರಿದೂಗಿಸಲು ಗಂಗಾವತಿ ಜಿಲ್ಲೆಯ ನವಲಿ ಗ್ರಾಮದ ಬಳಿ ಸಮತೋಲನಾ ಜಲಾಶಯ ನಿರ್ಮಿಸಲು ತುಂಗಭದ್ರಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಎಸ್‌.ಎಸ್‌. ಬೋಸ್‌ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಳೆಗಾಲದಲ್ಲಿ ಪ್ರವಾಹ ನಾಲೆಯ ಮೂಲಕ ನೀರನ್ನು ಶೇಖರಿಸಿ ಬಳಸಿಕೊಳ್ಳಲು ಉದ್ದೇಶಿಸಿರುವುದಾಗಿ ಅವರು ಹೇಳಿದರು.

‘ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ 33 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಜಲಾಶಯದ ಹೂಳು ತೆಗೆಯಲು ಸಾಧ್ಯವೇ ಇಲ್ಲ ಎಂದು ತಜ್ಞರು ಸ್ಪಷ್ಟವಾಗಿ ಹೇಳಿರುವುದರಿಂದ ನಮಗೆ ಬೇರೆ ಮಾರ್ಗವಿಲ್ಲ. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಸಮತೋಲನಾ ಜಲಾಶಯ ನಿರ್ಮಿಸುವುದು ಅನಿವಾರ್ಯ. ನಮ್ಮ ಪ್ರಸ್ತಾವನೆಗೆ ಆಂಧ್ರಪ್ರದೇಶ ತಕರಾರು ಎತ್ತಿಲ್ಲ. ಏನೇ ಸಮಸ್ಯೆ ಬಂದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ’ ಎಂದೂ ಶಿವಕುಮಾರ್‌ ತಿಳಿಸಿದರು.

ADVERTISEMENT

ಈ ಭಾಗದಲ್ಲಿ ಏತನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ₹140 ಕೋಟಿ ಪ್ರಕಟಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.