ADVERTISEMENT

ಬಾಂಗ್ಲಾ ಭಯೋತ್ಪಾದಕರಿಗೆ ಬೆಂಗಳೂರು ನಂಟು?

ಶಂಕಿತ ಉಗ್ರ ಫರಾನ್‌ನನ್ನು ರಾಜಧಾನಿಗೆ ಕರೆತಂದಿರುವ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 20:15 IST
Last Updated 22 ನವೆಂಬರ್ 2019, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜಮಾತ್‌–ಉಲ್‌–ಮುಜಾಹಿದೀನ್‌ ಬಾಂಗ್ಲಾದೇಶ (ಜೆಎಂಬಿ) ಉಗ್ರರ ಚಟವಟಿಕೆಗಳನ್ನು ಪತ್ತೆ ಹಚ್ಚಿದ ಬೆನ್ನಲ್ಲೇ ಅನ್ಸಾರುಲ್ಲಾ ಬಾಂಗ್ಲಾ ಎಂಬಇನ್ನೊಂದು ಉಗ್ರ ಸಂಘಟನೆಯು ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಸಕ್ರಿಯವಾಗಿರುವ ಸಂಗತಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯಿಂದ ಬಯಲಿಗೆ ಬಂದಿದೆ.

ಸ್ಥಳೀಯ ಪೊಲೀಸರ ಜತೆಗೂಡಿ ಎನ್‌ಐಎ ಇತ್ತೀಚೆಗೆ ಕೆಲವು ಬಾಂಗ್ಲಾ ಉಗ್ರರನ್ನು ಬಂಧಿಸಿದ ಬಳಿಕ ಅನ್ಸಾರುಲ್ಲಾ ಬಾಂಗ್ಲಾ ಸಂಘಟನೆ ಬೆಂಗಳೂರು, ಕೋಲ್ಕತ್ತಾ ಮತ್ತು ಮೇಘಾಲಯದಲ್ಲಿ ಸಕ್ರಿಯವಾಗಿರುವ ಸಂಗತಿ ಗೊತ್ತಾಗಿದೆ.

ಕೋಲ್ಕತ್ತಾದಲ್ಲಿ ಶಂಕಿತ ಉಗ್ರನೊಬ್ಬನನ್ನು ಎನ್‌ಐಎ ವಿಚಾರಣೆಗೆ ಒಳಪಡಿಸಿದಾಗ ಅನ್ಸಾರುಲ್ಲಾ ಬಾಂಗ್ಲಾದ ಬೆಂಗಳೂರು ನಂಟು ಬಹಿರಂಗವಾಯಿತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೇಘಾಲಯದಲ್ಲಿ ಎನ್ಐಎ ತಂಡ ಇದೇ 11ರಂದು ಬಂಧಿಸಿರುವ ಫರಾನ್‌ ತಾನು ಬೆಂಗಳೂರಿನಲ್ಲಿ ಓದುತ್ತಿದ್ದುದ್ದಾಗಿ ವಿಚಾರಣೆ ಸಮಯದಲ್ಲಿ ಹೇಳಿದ್ದಾನೆ. ಆರೋಪಿಯನ್ನು ಇಲ್ಲಿಗೆ ಕರೆತರಲಾಗಿದ್ದು, ಆತನ ಮಾಹಿತಿ ಆಧರಿಸಿ ಪೊಲೀಸರು ಬೆಂಗಳೂರಿನ ಅನೇಕ ಕಡೆಗಳಲ್ಲಿ ಶೋಧ ನಡೆಸಿದ್ದಾರೆ.

ಫರಾನ್‌ ಮತ್ತೊಬ್ಬನ ಜತೆಗೂಡಿ ಪೇಯಿಂಗ್‌ ಗೆಸ್ಟ್‌ ಆಗಿ ಮನೆಯೊಂದರಲ್ಲಿ ಉಳಿದುಕೊಂಡಿದ್ದಾಗಿ ಹೇಳಿದ್ದಾನೆ. ಆದರೆ, ಈತನ ಜತೆಗಿದ್ದವನು ಪರಾರಿಯಾಗಿದ್ದಾನೆ. ಈತನ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.

ಬೆಂಗಳೂರು ಉಗ್ರರ ಚಟುವಟಿಕೆಗಳ ತಾಣವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್‌ ಹೇಳಿಕೆ ನೀಡಿರುವ ಕೆಲವೇ ದಿನಗಳಲ್ಲಿ ಎನ್‌ಐಎ ಅಧಿಕಾರಿಗಳು ಉಗ್ರರ ತಾಣಗಳನ್ನು ಜಾಲಾಡಲು ಬಂದಿದ್ದಾರೆ.

ಆದರೆ, ಈಗ ಫರಾನ್‌ ಅವರನ್ನು ಕರೆದುಕೊಂಡು ಬಂದಿರುವ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಆಂತರಿಕ ಭದ್ರತಾ ವಿಭಾಗದ ಹಿರಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆಗೆ ಸಿಗಲಿಲ್ಲ.

ಬಾಣಾವರದಲ್ಲಿ ಸ್ಫೋಟಕ ಪತ್ತೆಯಾಗಿತ್ತು:ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಸಂಬಂಧ ಬಂಧಿಸಿರುವಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ವಾಸವಿದ್ದ ಚಿಕ್ಕಬಾಣಾವರ ಮನೆಯಲ್ಲಿ ಕೆಲವು ತಿಂಗಳ ಮೊದಲು 50ಕ್ಕೂ ಹೆಚ್ಚು ಟಿಫಿನ್ ಬಾಕ್ಸ್‌ ಬಾಂಬ್‌ ಸಿದ್ಧಪಡಿಸುವಷ್ಟು ಸ್ಫೋಟಕಗಳನ್ನು ಪೊಲೀಸರ ಸಹಾಯದೊಂದಿಗೆ ಎನ್‌ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ದೊಡ್ಡಬಳ್ಳಾಪುರದಲ್ಲಿ ಜೂನ್ 25ರಂದು ಹಬೀಬುರ್‌ನನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು, ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಬಾಂಬ್‌ ತಯಾರಿಕೆಗಾಗಿ ಚಿಕ್ಕಬಾಣಾವರದ ಹಳೇ ರೈಲ್ವೆ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮಿನಿ ಲ್ಯಾಬ್ ಮಾಡಿಕೊಂಡಿದ್ದ ವಿಷಯವನ್ನು ಬಾಯ್ಬಿಟ್ಟಿದ್ದ. ಅದೇ ಮಾಹಿತಿ ಆಧರಿಸಿ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಮನೆಯೊಳಗಿದ್ದ ಮಿನಿ ಲ್ಯಾಬ್ ಕಂಡು ಹೌಹಾರಿದ್ದರು.

‘ಬಳೆ ಹಾಗೂ ಉಂಗುರ ಮಾರಾಟಗಾರರ ಸೋಗಿನಲ್ಲಿ ಚಿಕ್ಕಬಾಣಾವರಕ್ಕೆ ಬಂದಿದ್ದಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ಹಾಗೂ ಆತನ ಇಬ್ಬರು ಸಹಚರರು, ಸ್ಥಳೀಯ ನಿವಾಸಿ ಮಸ್ತಾನ್ ಎಂಬುವರ ಮಾಲೀಕತ್ವದ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಅದೇ ಮನೆಯಲ್ಲೇ ಎರಡು ವರ್ಷಗಳಿಂದ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶಂಕಿತ ಉಗ್ರರು, ರಾಶಿ ರಾಶಿ ಸ್ಫೋಟಕಗಳನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರು. ಮೂರು ತಿಂಗಳಿಂದಲೂ ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಉಗ್ರರ ಚಟುವಟಿಕೆ ಕುರಿತ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.