ADVERTISEMENT

ನಿರ್ಮಲಾನಂದ ಶ್ರೀಗಳ ಬೇಡಿಕೆ: ಚಕ್ರತೀರ್ಥ ವಿಚಾರವಾಗಿ ಸೂಕ್ತ ತೀರ್ಮಾನ– ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 30 ಮೇ 2022, 1:06 IST
Last Updated 30 ಮೇ 2022, 1:06 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕುವೆಂಪು ವಿರಚಿತ ನಾಡಗೀತೆಯನ್ನು ತಿರುಚಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ಬೇಡಿಕೆ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಿರ್ಮಲಾನಂದನಾಥ ಶ್ರೀಗಳು ಕುವೆಂಪು ಅವರಿಗೆ ಸಂಬಂಧಿಸಿದಂತೆ ಗಂಭೀರವಾದ ವಿಚಾರವನ್ನು ಮುಂದಿಟ್ಟಿದ್ದಾರೆ. ಆ ಕುರಿತು ಶಿಕ್ಷಣ ಸಚಿವರ ಜತೆ ಸಭೆ ನಡೆಸುತ್ತೇನೆ. ಚರ್ಚೆಗೆ ಬರುವಂತೆ ಸಚಿವರಿಗೆ ಈಗಾಗಲೇ ಸೂಚಿಸಿದ್ದೇನೆ. ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು’ ಎಂದರು.

ರಾಜ್ಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿರುವ ರೋಹಿತ್‌ ಚಕ್ರತೀರ್ಥ ಅವರು ನಾಡಗೀತೆ ಮತ್ತು ಕುವೆಂಪು ಕುರಿತು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರಹವೊಂದನ್ನು ಪ್ರಕಟಿಸಿದ್ದರು. ಚಕ್ರತೀರ್ಥ ಅವರು ಕುವೆಂಪು ಮತ್ತು ನಾಡಗೀತೆಯನ್ನು ಅವಮಾನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಕುವೆಂಪು ಮತ್ತು ನಾಡಗೀತೆಯನ್ನು ನಿಂದಿಸಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.