ADVERTISEMENT

ಪಾಲಿಕೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗಿ: ನಳಿನ್ ಕುಮಾರ್ ಕಟೀಲ್

ಕಾರ್ಯಕರ್ತರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 11:19 IST
Last Updated 26 ಫೆಬ್ರುವರಿ 2020, 11:19 IST
ಬೆಳಗಾವಿ ನಗರ ಘಟಕ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕಾಂತ ಪಾಟೀಲ ಹಾಗೂ ಸಂಜಯ ಪಾಟೀಲ ಅವರಿಗೆ ನಿರ್ಗಮಿತ ಅಧ್ಯಕ್ಷರಾದ ರಾಜೇಂದ್ರ ಹರಕುಣಿ, ಡಾ.ವಿ.ಐ. ಪಾಟೀಲ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಬುಧವಾರ ಅಧಿಕಾರ ಹಸ್ತಾಂತರಿಸಿದರು
ಬೆಳಗಾವಿ ನಗರ ಘಟಕ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕಾಂತ ಪಾಟೀಲ ಹಾಗೂ ಸಂಜಯ ಪಾಟೀಲ ಅವರಿಗೆ ನಿರ್ಗಮಿತ ಅಧ್ಯಕ್ಷರಾದ ರಾಜೇಂದ್ರ ಹರಕುಣಿ, ಡಾ.ವಿ.ಐ. ಪಾಟೀಲ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸಮ್ಮುಖದಲ್ಲಿ ಬುಧವಾರ ಅಧಿಕಾರ ಹಸ್ತಾಂತರಿಸಿದರು   

ಬೆಳಗಾವಿ: ‘ಮುಂಬರುವ ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೂಚಿಸಿದರು.

ಇಲ್ಲಿ ಮರಾಠಾ ಮಂದಿರದಲ್ಲಿ ಬುಧವಾರ ನಡೆದ ಪಕ್ಷದ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಬಾರಿಯ ನಗರಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯಲ್ಲಿ ಎದುರಿಸಲಾಗುವುದು. ಹೀಗಾಗಿ, ನೂತನ ಅಧ್ಯಕ್ಷರು ಸಂಘಟನೆಗೆ ಗಮನ ಕೊಡಬೇಕು’ ಎಂದು ತಿಳಿಸಿದರು.

ADVERTISEMENT

‘ಪಕ್ಷ ಪ್ರಸ್ತುತ ಸುವರ್ಣ ಯುಗದಲ್ಲಿದೆ. ಸರ್ವವ್ಯಾಪಿಯಾಗಿ ವ್ಯಾಪಿಸಿದೆ. ಹೀಗಾಗಿ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ಜವಾಬ್ದಾರಿ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೆಂಬಲಿಗರನ್ನು ಗೆಲ್ಲಿಸಬೇಕು. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜವಾಬ್ದಾರಿಯನ್ನು ಹೆಗಲಲ್ಲೇ ಇಟ್ಟುಕೊಳ್ಳಬೇಕು. ತಲೆಗೇರಿಸಿಕೊಂಡರೆ ಅಹಂಕಾರ ಬರುತ್ತದೆ’ ಎಂದು ಹೇಳಿದರು.

ಯಡಿಯೂರಪ್ಪ ಮುಂದುವರಿಕೆ:

‘ಜನರ ಕಣ್ಣೀರು ಒರೆಸುತ್ತಿರುವ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದ ಅವಧಿ ಪೂರ್ಣಗೊಳಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು. ಈಗ, ಅಧ್ಯಕ್ಷರಾದವರಿಗೆ ಸವಾಲೂ ಇದೆ. ಸಾಲು ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಬೇಕು. ಇಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಗೆದ್ದರೆ, ಪದಾಧಿಕಾರಿಗಳನ್ನು ಅಭಿನಂದಿಸಲು ನಾನೇ ಬರುತ್ತೇನೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಬೆಳಗಾವಿಯವರು ಬೆಂಗಳೂರು ನಂತರ ರಾಜಕೀಯವಾಗಿ ಬಲಾಢ್ಯರಾಗಿದ್ದೇವೆ. ಇಲ್ಲಿ ಹೆಚ್ಚು ಶಾಸಕರು ಆರಿಸಿ ಬಂದ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಇತಿಹಾಸ ಗಮನಿಸಿದರೆ ತಿಳಿಯುತ್ತದೆ. ಮುಂದಿನ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲೂ ‌ಪಕ್ಷ ಗೆಲ್ಲಬೇಕು’ ಎಂದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ‘17 ಶಾಸಕರ ರಾಜೀನಾಮೆಯಿಂದ‌ ಬಿಜೆಪಿ ಸರ್ಕಾರ ಬಂದಿದೆ. ಈ ಭಾಗದಲ್ಲಿ ಬಿಜೆಪಿಯ ಅತಿ ಹೆಚ್ಚು ಶಾಸಕರಿದ್ದೇವೆ. ಕೃಷ್ಣಾ, ಘಟಪ್ರಭಾ ಮೇಲ್ದಂಡೆ ಯೋಜನೆ ಮೊದಲಾದವುಗಳಿಗೆ ಆದ್ಯತೆ‌ ನೀಡಬೇಕು. ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

ವಸ್ತು ಖರೀದಿಸುವುದು ಬೇಡ:

ಶಾಸಕರಾದ ಅಭಯ ‍ಪಾಟೀಲ ಮತ್ತು ಅನಿಲ ಬೆನಕೆ, ‘ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುತ್ತೇವೆ’ ಎಂದರು.

ನಗರ ಘಟಕದ ನೂತನ ಅಧ್ಯಕ್ಷ ಶಶಿಕಾಂತ ಪಾಟೀಲ, ‘ಸಿಎಎ ವಿರೋಧಿಸುವವರ ಬಳಿ ಯಾವುದೇ ವಸ್ತು ಖರೀದಿಸದಿರುವ ಸಂಕಲ್ಪ ಮಾಡೋಣ’ ಎಂದು ಹೇಳಿದರು.

ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಇಷ್ಟು ವರ್ಷ ಭಾಷಣ ಮಾಡಿದ್ದು ಸಾಕು, ಸಂಘಟನೆ ಮಾಡು ಎಂದು ಪಕ್ಷ ಜವಾಬ್ದಾರಿ ಕೊಟ್ಟಿದೆ. ನಾನು ಅಧ್ಯಕ್ಷ ಅಲ್ಲ ದಕ್ಷ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ನಿರ್ಗಮಿತ ಅಧ್ಯಕ್ಷರಾದ ರಾಜೇಂದ್ರ ಹರಕುಣಿ, ಡಾ.ವಿ.ಐ. ಪಾಟೀಲ ಮಾತನಾಡಿದರು.

ಶಾಸಕ ಮಹಾದೇವಪ್ಪ ಯಾದವಾಡ, ಮುಖಂಡರಾದ ಎಂ.ಬಿ. ಝಿರಲಿ, ಮಹೇಶ ಟೆಂಗಿನಕಾಯಿ, ಆರ್.ಎಸ್. ಮುತಾಲಿಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.