ADVERTISEMENT

ಬಂದ್‌: ಎರಡನೇ ದಿನ ನೀರಸ, ಸಾರಿಗೆ ನಿಗಮಕ್ಕೆ ₹ 7.82 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:34 IST
Last Updated 9 ಜನವರಿ 2019, 19:34 IST
ಕೇಂದ್ರ ಕಾರ್ಮಿಕರ ಸಂಘಟನೆಗಳ ಕರೆಗೆ ಬೆಂಬಲಿಸಿ ವಿವಿಧ ಕಾರ್ಮಿಕರ ಸಂಘಟನೆಗಳ ಸದಸ್ಯರು ಟೌನ್‌ಹಾಲ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಕೇಂದ್ರ ಕಾರ್ಮಿಕರ ಸಂಘಟನೆಗಳ ಕರೆಗೆ ಬೆಂಬಲಿಸಿ ವಿವಿಧ ಕಾರ್ಮಿಕರ ಸಂಘಟನೆಗಳ ಸದಸ್ಯರು ಟೌನ್‌ಹಾಲ್‌ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಬೆಂಗಳೂರು:ಮೋಟಾರು ವಾಹನ ತಿದ್ದುಪಡಿ ಮಸೂದೆ, ಕಾರ್ಮಿಕ ಕಾನೂನು ತಿದ್ದುಪಡಿ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ‘ಭಾರತ್‌ ಬಂದ್‌’ಗೆ ರಾಜ್ಯದಲ್ಲಿ ಬುಧವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಷ್ಕರ ಬೆಂಬಲಿಸಿ ಬಹುತೇಕ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆಗಳು, ಧರಣಿ ನಡೆದವು. ಕೆಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.

ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೆಲವು ಜಿಲ್ಲೆಗಳಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ಬಸ್ ಸಂಚಾರ ಸ್ಥಗಿತಗೊಂಡಿತು. ಆದರೆ, ಜನಜೀವನದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.

ADVERTISEMENT

ಆದರೆ, ಮುಂಜಾಗ್ರತಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಶಾಲಾ, ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿತ್ತು.

ಮಂಗಳೂರು, ಉಡುಪಿ, ತುಮಕೂರು ಜಿಲ್ಲೆಯಲ್ಲಿ ಬಂದ್‌ ಬಿಸಿ ತಟ್ಟಲಿಲ್ಲ. ಬೆಳಗಾವಿ ಜಿಲ್ಲೆಯಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಗಲಕೋಟೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಅಂಚೆ ಇಲಾಖೆ ನೌಕರರು ಧರಣಿ ಮುಂದುವರಿಸಿದರು.

ಕಾರವಾರದಲ್ಲಿ ಬಸ್‌ಗಳಿಗೆ ಅಡ್ಡ ನಿಂತ ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಬಳ್ಳಾರಿಯಲ್ಲಿ ಡಿಪೊ ಮುಂಭಾಗ ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದರಿಂದ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಬಳ್ಳಾರಿಯಲ್ಲಿ ಕಾರ್ಮಿಕ ಮುಖಂಡರು ಪ್ರಧಾನಿ ನರೇಂದ್ರ ಮೋದಿಯ ಅಣಕು ಶವಯಾತ್ರೆ‌ ನಡೆಸಿದರು. ಮುಷ್ಕರ ಬೆಂಬಲಿಗರು ಮತ್ತು ವಾಹನ ಸವಾರರ ಮಧ್ಯೆ ವಾಗ್ವಾದವೂ ನಡೆಯಿತು. ಕಲಬುರ್ಗಿಯಲ್ಲಿ ರೈಲು ತಡೆ ನಡೆಸಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಪ್ರತಿಭಟನಕಾರರು ಮತ್ತು ಪೊಲೀಸರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು.

ಸಾರಿಗೆ ನಿಗಮಕ್ಕೆ ₹ 7.82 ಕೋಟಿ ನಷ್ಟ: ಬೆಂಗಳೂರಿನಲ್ಲಿ ಬಿಎಂಟಿಸಿಯ 26 ಬಸ್‌ಗಳಿಗೆ ಕಲ್ಲು ತೂರಲಾಗಿದೆ.₹7.50 ಲಕ್ಷ, ಓಡಾಟ ವ್ಯತ್ಯಯದಿಂದ ₹3 ಕೋಟಿ ಆದಾಯ ನಷ್ಟವಾಗಿದೆ. ಕೆಎಸ್‌ಆರ್‌ಟಿಸಿಯ 12 ಬಸ್‌ಗಳ ಮೇಲೆ ಕಲ್ಲು ತೂರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಾರಿಗೆ ನಿಗಮಕ್ಕೆ ₹ 7.82 ಕೋಟಿ ನಷ್ಟ

ಬೆಂಗಳೂರಿನಲ್ಲಿ ಬಿಎಂಟಿಸಿಯ 26 ಬಸ್‌ಗಳಿಗೆ ಕಲ್ಲು ತೂರಲಾಗಿದೆ. ಈ ಘಟನೆಯಿಂದ ಸುಮಾರು ₹ 7.50 ಲಕ್ಷ, ಓಡಾಟ ವ್ಯತ್ಯಯದಿಂದ ₹ 3 ಕೋಟಿ ಆದಾಯ ನಷ್ಟವಾಗಿದೆ. ಕೆಎಸ್‌ಆರ್‌ಟಿಸಿಯ 12 ಬಸ್‌ಗಳ ಮೇಲೆ ಕಲ್ಲು ತೂರಲಾಗಿದೆ. ನಾಲ್ಕು ವೋಲ್ವೊ, ಒಂದು ಫ್ಲೈಬಸ್‌, ಎರಡು ಸ್ಲೀಪರ್‌, 5 ಕರ್ನಾಟಕ ಸಾರಿಗೆ ಬಸ್‌ಗಳು ಹಾನಿಗೊಳಗಾಗಿವೆ.

ಎರಡು ದಿನಗಳಲ್ಲಿ ಒಟ್ಟು 17 ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು ₹2.32 ಲಕ್ಷ ಸಂಭವಿಸಿದೆ. ಎರಡು ದಿನಗಳ ಕಾಲ ಸಂಚಾರ ಸ್ಥಗಿತದಿಂದ ₹ 7.82 ಕೋಟಿ ನಷ್ಟವಾಗಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.