ADVERTISEMENT

ನರೇಂದ್ರ ಮೋದಿಯಿಂದ ಅಲ್ಲ, ಕುತಂತ್ರದಿಂದ ಬಿಜೆಪಿ ಅಧಿಕಾರ ಹಿಡಿದಿದೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 7:01 IST
Last Updated 29 ಜುಲೈ 2019, 7:01 IST
   

ಬೆಂಗಳೂರು:‘ರಾಜೀನಾಮೆ ಕೊಡಿಸಲು ಮಾಡುತ್ತಿರುವ ಹುನ್ನಾರವನ್ನು ಈಗಲಾದರು ನಿಲ್ಲಿಸಿ.ಈಗ ಅಧಿಕಾರ ಸಿಕ್ಕಿದೆ ನಡೆಸಿ. ನಾವೇನು ತರಾತುರಿಯಲ್ಲಿ ನಿಮ್ಮ ಸಂಖ್ಯೆಯನ್ನು 100 ಮಾಡಿ, ಮತ್ತೆ ನಿಮ್ಮನ್ನು ಸ್ಥಾನಪಲ್ಲಟ ಮಾಡುವುದಿಲ್ಲ. ನಡೆಸಿ ನೋಡಣ ಯಾವ ರೀತಿ ಸರ್ಕಾರ ನಡೆಸುತ್ತೀರಾ ನೋಡುತ್ತವೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, ‘ನರೇಂದ್ರ ಮೋದಿ, ಜೆ.ಪಿ. ನಡ್ಡಾ ಅಥವಾ ಬಿಜೆಪಿಯ ಯಾವುದೇ ಬೇರೆ ಕೇಂದ್ರದ ನಾಯಕರಿಂದ ನೀವು ಅಧಿಕಾರಕ್ಕೆ ಬಂದಿಲ್ಲ. ಕುತಂತ್ರದಿಂದಲೇ ಅಧಿಕಾರ ಹಿಡಿದ್ದಿದ್ದಾರೆ’ ಎಂದು ಟೀಕಿಸಿದರು.

‘ಮೈತ್ರಿ ಸರ್ಕಾರ ಯಾವ ರೀತಿ ಜನಪರ ಕೆಲಸಗಳನ್ನು ಮಾಡಿದೆ ಎನ್ನುವುದು ಈಗಾಗಲೇ ದಾಖಲಾಗಿದೆ.ಮೈತ್ರಿ ಸರ್ಕಾರದಿಂದಾಗಿ ಆಡಳಿತ ಕುಸಿದಿತ್ತು ಎಂಬುದು ಸುಳ್ಳು.ಇದು ಕೇವಲ ಬಾಯಿಚಪಲದ ಮಾತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು’ ಎಂದರು.

ADVERTISEMENT

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬರಲು 14 ತಿಂಗಳಿಂದಲೂ ಅವಿರತ ಶ್ರಮಿಸಿದ್ದಾರೆ. ತೃಪ್ತರು ಮತ್ತು ಅತೃಪ್ತರು ಅದ್ಯಾವಾಗ ಪಿಶಾಚಿಗಳಾಗುವರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬೆಳಿಗ್ಗೆ 5 ಗಂಟೆಗೆ ನೀವು ಪಕ್ಷೇತರ ಶಾಸಕರನ್ನು ನೀವು ಅನರ್ಹರನ್ನಾಗಿಸಿದಿರಿ. ಆಗಲು ನಿಮಗೆ ಬಹುಮತ ಇರಲಿಲ್ಲ. ಅವತ್ತು 6 ಜನ ಪಕ್ಷೇತರ ಶಾಸಕರಿಂದ ನೀವು ಅಂದು ಮುಖ್ಯಮಂತ್ರಿ ಆಗಿದ್ದಿರಿ. ಆದರೆ, ನಂತರ ಅವರನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದಿರಿ. ಅವೆಲ್ಲವೂ ಇತಿಹಾಸದ ಪುಟಗಳಲ್ಲಿದ್ದಾವೆ. ನಮ್ಮ ಅಧ್ಯಕ್ಷರು ಯಾವುದೇ ತರಾತುರಿಯಲ್ಲಿ ನಿರ್ಧಾರ ಮಾಡಲಿಲ್ಲ. ಅವರನ್ನು ಕರೆಸಿ, ಕೆಲವು ಪ್ರಶ್ನೆಗಳನ್ನು ಮಾಡಿದರೆ, ಉತ್ತರ ಕೊಡಲು ಅವರಿಗೆ ಸಾಧ್ಯವಾಗಿಲ್ಲ. ಅವತ್ತು ಸ್ಪೀಕರ್ ಆಗಿದ್ದ ಬೋಪಯ್ಯ ಅವರನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೋಗಿದ್ದಿರಿ’ ಎಂದರು.

‘ವಿರೋಧ ಪಕ್ಷದವರಾಗಿ ನೀವು ಪಡೆದ ಮಾಹಿತಿ ಹಾಗೂ ಈಗ ಅಧಿಕಾರ ಸ್ಥಾನದಲ್ಲಿ ಕುಳಿದು ಮೈತ್ರಿ ಸರ್ಕಾರದಲ್ಲಿ ಯಾವ ರೀತಿ ಆಡಳಿತ ಯಂತ್ರ ಕುಸಿದಿತ್ತು ಎನ್ನುವ ಮಾಹಿತಿಯನ್ನು ಸದನದ ಮುಂದಿಟ್ಟರೆ, ನಾನು ಅವರನ್ನು ಅಭಿನಂದಿಸುತ್ತೇನೆ.37 ಶಾಸಕ ಸ್ಥಾನವನ್ನು ಹೊಂದಿರುವ ಕುಮಾರಸ್ವಾಮಿ ಅವರಪಾಪದ ದಿನಗಳನ್ನು ನೋಡಿದ್ದೇವೆ ಎಂದು ಹೇಳಿದ್ದೀರಿ. ಇವತ್ತು ಈ ರಾಜ್ಯದಲ್ಲಿ ಪವಿತ್ರ ದಿನಗಳು ಪ್ರಾರಂಭವಾಗಿವೆ ಎನ್ನುತ್ತಿದ್ದೀರಿ, ಬಹಳ ಸಂತೋಷ.ಹಲವಾರು ರೀತಿ ಅಡಚಣೆಗಳಿದ್ದರೂ ಮೈತ್ರಿ ಸರ್ಕಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸಂತೋಷ ನನ್ನ ಆತ್ಮಸಾಕ್ಷಿಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.