ADVERTISEMENT

‘ಮಿಷನ್‌ ದಕ್ಷಿಣ್‌’ ಅಡಿ ಎಲ್ಲ ರಾಜ್ಯಗಳಲ್ಲೂ ಪಕ್ಷವು ಬೇರು ಬಿಡಲಿದೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:31 IST
Last Updated 4 ಜುಲೈ 2022, 13:31 IST
   

ಬೆಂಗಳೂರು: ‘ಮಿಷನ್‌ ದಕ್ಷಿಣ್‌’ ಯೋಜನೆ ಅನ್ವಯ ಜನಸಂಖ್ಯೆಯ ಶೇ 70 ಕ್ಕೂ ಹೆಚ್ಚು ಇರುವ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ತಲುಪುವುದರ ಜತೆಗೆ, ಆ ಫಲಾನುವಿಗಳನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೇಕು. ಅದರಿಂದ ದಕ್ಷಿಣವೂ ಸೇರಿ ಎಲ್ಲ ರಾಜ್ಯಗಳಲ್ಲೂ ಪಕ್ಷವು ಗಟ್ಟಿಯಾಗಿ ಬೇರು ಬಿಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ವಿಷಯ ಚರ್ಚೆಯಾಗಿದೆ. ಈ ಸಂಬಂಧ ಪ್ರಧಾನಿ ಮೋದಿಯವರು ‘ಸ್ನೇಹಯಾತ್ರೆ’ಯ ಕಲ್ಪನೆಯನ್ನು ಮುಂದಿಟ್ಟಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಬೆಳವಣಿಗೆಯಿಂದ ಪರಿವಾರವಾದಿಗಳು, ಜಾತಿವಾದಿಗಳು ಕಂಗೆಟ್ಟಿದ್ದಾರೆ. ಅವರೆಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾಲ ಕಾಲಕ್ಕೆ ಕೆಲವು ಮುಖವಾಡ ಹಾಕುತ್ತಾರೆ. ಜಾತ್ಯತೀತತೆಯೂ ಅವರ ಜಾತಿ ರಾಜಕಾರಣವನ್ನು ಮುಚ್ಚಿಕೊಳ್ಳುವ ಮುಖವಾಡ ಎಂದು ರವಿ ಹೇಳಿದರು.

ADVERTISEMENT

ನ್ಯಾಷನ್‌ ಕಾನ್ಫರೆನ್ಸ್‌, ಆರ್‌ಜೆಡಿ, ಸಮಾಜವಾದಿ ಪಕ್ಷ, ಜೆಡಿಎಸ್‌ಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಆದರೆ ಇವರೆಲ್ಲರೂ ಆಂತರಿಕ ಪ್ರಜಾಪ್ರಭುತ್ವದ ಕುರಿತು ಭಾಷಣ ಮಾಡುತ್ತಾರೆ. ಜನ ಇವರನ್ನು ತಿರಸ್ಕರಿಸಿ, ಬಿಜೆಪಿಯನ್ನು ಬೆಂಬಲಿಸುತ್ತಿರುವುದರಿಂದ ಈಗ ಇವರೆಲ್ಲ ಬಾಲ ಸುಟ್ಟ ಬೆಕ್ಕಿನಂತೆ ಚೀರಾಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತದೆ. ಉತ್ತರಾಖಂಡ್‌, ಗೋವಾ, ಪಂಜಾಬ್‌, ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಥಿತಿ ಏನಾಯಿತು ಎಂಬುದು ಗೊತ್ತೇ ಇದೆ. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದಕ್ಕೆ ಉಲ್ಟಾ ಆಗುವುದು ಐತಿಹಾಸಿಕ ಸತ್ಯ ಎಂದು ರವಿ ವ್ಯಂಗ್ಯವಾಡಿದರು.

ಕೆನಡಾ ಚಲನಚಿತ್ರೋತ್ಸವದಲ್ಲಿ ‘ಕಾಳಿ’ ಸಿನಿಮಾದ ಪೋಸ್ಟರ್‌ನಲ್ಲಿ ಕಾಳಿ ಮಾತೆ ಸಿಗರೇಟ್‌ ಸೇದುವ ಚಿತ್ರವಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ದೇವಾನು ದೇವತೆಗಳನ್ನು ಅಪಮಾನಿಸುವುದು ಎಷ್ಟು ಸೂಕ್ತ? ನಾವು ಬೇರೆಯವರಂತೆ ರೊಚ್ಚಿಗೇಳುವುದಿಲ್ಲ. ಅದು ನಮ್ಮ ದೌರ್ಬಲ್ಯ ಎಂದೂ ಭಾವಿಸಬಾರದು. ನಿರ್ಮಾಪಕರು ಮತ್ತು ನಿರ್ದೇಶಕರು ತಕ್ಷಣ ತಮ್ಮ ನಿಲುವು ಬದಲಿಸಬೇಕು. ಇಲ್ಲದಿದ್ದರೆ ನಾವು ಕಾನೂನಾತ್ಮಕವಾಗಿ ನಮ್ಮ ಧರ್ಮದ ಪರಂಪರೆ ಉಳಿಸಲು ಹೋರಾಡುತ್ತೇವೆ’ ಎಂದರು. ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.