ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯದೇ ಇದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಅವರಿಗೆ ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯ ಮತ್ತು ಸಿ.ಕೆ.ರಾಮಮೂರ್ತಿ ನೇತೃತ್ವದ ನಿಯೋಗ ಸೋಮವಾರ ಮನವಿ ಪತ್ರ ಸಲ್ಲಿಸಿತು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರವಿಸುಬ್ರಹ್ಮಣ್ಯ ,‘ಮೆಟ್ರೊ ಪ್ರಯಾಣ ದರ ಏರಿಕೆ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಗರದ ಜನತೆಗೆ ಬಹುದೊಡ್ಡ ಆಘಾತ ನೀಡಿದೆ. ಆದರೆ, ಯಾವುದೇ ಸೇವೆಯಲ್ಲಿ ಸುಧಾರಣೆ ಮಾತ್ರ ಆಗಿಲ್ಲ. ಒಮ್ಮೆಲೆ ಶೇಕಡ 46 ರಿಂದ ಶೇ 50 ರಷ್ಟು ಏರಿಕೆ ಮಾಡಿದೆ. ಈ ಮೂಲಕ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೊ ಸೇವೆ ಎನಿಸಿದೆ’ ಎಂದು ತಿಳಿಸಿದರು.
ಮೆಟ್ರೊ ಯೋಜನೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲು ವಿಫಲವಾದ ಕಾರಣ ಯೋಜನಾ ವೆಚ್ಚವು ದುಪ್ಪಟ್ಟಾಗಿದೆ. 18 ಕಿ.ಮೀ ಹಳದಿ ಮಾರ್ಗವು ಸಿದ್ಧವಾಗಿದ್ದರೂ ರೈಲು ಬೋಗಿಗಳು ಇಲ್ಲದೇ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಾಲೋಚನೆ ಇಲ್ಲದೆ, ಸೂಕ್ತ ತಯಾರಿ ಇಲ್ಲದ ಕಾರಣ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಅಧಿಕಾರಿಗಳ ಅದಕ್ಷತೆಗೆ ನಾಗರಿಕರು ದಂಡ ತೆರುವಂತಾಗಿದೆ ಎಂದು ಅವರು ತಿಳಿಸಿದರು.
ಸಿ.ಕೆ.ರಾಮಮೂರ್ತಿ ಮಾತನಾಡಿ, ‘ನಗರದ ನಾಗರಿಕರನ್ನು ಸುಲಿಗೆ ಮಾಡಲು ಬಿಡುವುದಿಲ್ಲ. ದರ ಏರಿಕೆ ಹಿಂದಕ್ಕೆ ಪಡೆಯದೇ ಇದ್ದರೆ, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮೆಟ್ರೊ ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದ ಯೋಜನೆ. ಆದರೆ, ಮೆಟ್ರೊ ನಿರ್ಮಾಣ, ಕಾರ್ಯನಿರ್ವಹಣೆ ಮತ್ತು ಜಾಲದ ವಿಸ್ತರಣೆಯ ಏಜೆನ್ಸಿ ರಾಜ್ಯ ಸರ್ಕಾರವೇ ಆಗಿದೆ. ಮೆಟ್ರೊ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯೂ ರಾಜ್ಯ ಸರ್ಕಾರದ್ದಾಗಿದೆ. ದರ ಪರಿಷ್ಕರಣೆ ಸಮಿತಿಯನ್ನು ರಚಿಸುವುದೂ ಕೂಡ ರಾಜ್ಯ ಸರ್ಕಾರ. ರಾಜ್ಯಕ್ಕೆ ನಿರ್ವಹಣೆ ಮಾಡಲು ಆಗದಿದ್ದರೆ ಅದರ ನಿಯಂತ್ರಣವನ್ನು ಕೇಂದ್ರ ಸರ್ಕಾರಕ್ಕೆ ನೀಡಲಿ ಎಂದು ಬಿಜೆಪಿ ವಕ್ತಾರ ಎಸ್.ಪ್ರಕಾಶ್ ಆಗ್ರಹಿಸಿದರು.
ನಿಯೋಗದಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್, ಮಾಜಿ ಮೇಯರ್ ಗೌತಮ್ ಮತ್ತು ಇತರರು ಇದ್ದರು.
ದರ ಏರಿಕೆ ವಿರೋಧಿಸಿ ನಗರದ ವಿವಿಧ ಮೆಟ್ರೊ ನಿಲ್ದಾಣಗಳ ಬಳಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.