ADVERTISEMENT

ಸಭಾಧ್ಯಕ್ಷರ ನಡೆ ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 19:30 IST
Last Updated 11 ಜುಲೈ 2019, 19:30 IST
   

ಬೆಂಗಳೂರು: ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಅವರು, ಶಾಸಕರ ರಾಜೀನಾಮೆಯನ್ನು ಪಕ್ಷಾಂತರ ಕಾಯ್ದೆಗೆ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಮೈತ್ರಿ ಸರ್ಕಾರದ ಬಗ್ಗೆ ಬಂಡಾಯವೆದ್ದು ಸ್ವಯಂ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಸಭಾಧ್ಯಕ್ಷರು ಇದನ್ನು ಪಕ್ಷಾಂತರ ಎಂದು ಭಾವಿಸುವ ಅಗತ್ಯವಿಲ್ಲವೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಪಕ್ಷಾಂತರ ಮಾಡಿದವರಿಗೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಅವಕಾಶವಿದೆ. ಈಗ ರಾಜೀನಾಮೆ ನೀಡಿರುವ ಶಾಸಕರು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದ ಮೇಲೆ ಶಾಸಕರ ರಾಜೀನಾಮೆಗೂ ಪಕ್ಷಾಂತರಕ್ಕೆ ಸಂಬಂಧ ಕಲ್ಪಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದರು.

ADVERTISEMENT

ರಾಜೀನಾಮೆ ಸ್ವೀಕರಿಸಿ ಪ್ರಕರಣವನ್ನು ಇವತ್ತೇ ಇತ್ಯರ್ಥ ಮಾಡಿ ಎಂದು ಸುಪ್ರೀಂಕೋರ್ಟ್‌ ಹೇಳಿದ್ದರೂ, ತೀರ್ಮಾನ ತೆಗೆದುಕೊಂಡಿಲ್ಲ. ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸಿದ್ದಾರೆ ಎಂದರು. ‌ ಆದೇಶವನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ ವ್ಯಂಗ್ಯವಾಡಿದ್ದಾರೆ. ರಾಜೀನಾಮೆ ಸರಿ ಇದೆಯೊ ಇಲ್ಲವೊ ಗಮನಿಸುವುದು ಅವರ ಕೆಲಸ. ಅದನ್ನು ಗಂಭೀರವಾಗಿ ಮಾಡಿದಂತಿಲ್ಲ ಎಂದು ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.