ADVERTISEMENT

ಕಾಲ್ತುಳಿತದಲ್ಲಿ 11 ಮಂದಿ ಸಾವಿನ ದುರಂತ ಮರೆಮಾಚಲು ಜಾತಿಗಣತಿಯ ನಾಟಕ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 11:41 IST
Last Updated 11 ಜೂನ್ 2025, 11:41 IST
   

ಬೆಂಗಳೂರು: ಆರ್‌ಸಿಬಿ ಕಾಲ್ತುಳಿತದಲ್ಲಿ 11 ಮಂದಿಯ ಸಾವಿನ ದುರಂತವನ್ನು ಮರೆಮಾಚಲು  ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಸಿದ್ದರಾಮಯ್ಯ ಅವರು ಮತ್ತೊಂದು ಜಾತಿ ಗಣತಿಯ ಬೃಹತ್‌ ನಾಟಕ ಆರಂಭಿಸಿವೆ ಎಂದು ಬಿಜೆಪಿ ಆರೋಪಿಸಿದೆ.

ಸಾರ್ವಜನಿಕರ ಗಮನ ಬೇರೆ ಕಡೆ ಸೆಳೆಯುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಾಧನವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ವಿಧಾನಪರಿಷತ್‌  ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.

ಕಾಲ್ತುಳಿತ ಮತ್ತು 11 ಜನರ ಸಾವಿಗೆ ಸಂಬಂಧಿಸಿದಂತೆ ಎಐಸಿಸಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ತಲೆದಂಡದ ನಿರೀಕ್ಷೆಯಲ್ಲಿದ್ದೆವು. ಅದರ ಬದಲಿಗೆ ಜಾತಿಗಣತಿ ಅಡ್ಡ ಇಟ್ಟಿದೆ ಎಂದು ಹೇಳಿದೆ. 

ADVERTISEMENT

ಈ ಕುರಿತು ಮಾತನಾಡಿರುವ ಅಶೋಕ, ‘ಸರ್ಕಾರಕ್ಕೆ ನಿಜಕ್ಕೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ ಸಮೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ನಡೆಸಿ, ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಎಲ್ಲರ ಅಭಿಪ್ರಾಯಗಳನ್ನು ಕೇಳಿ, ಸಮಗ್ರವಾಗಿ ಎಲ್ಲ ಸಿದ್ಧತೆಗಳನ್ನು ಮುಗಿಸಿ, ಈ ಶೈಕ್ಷಣಿಕ ವರ್ಷ ಮುಗಿದ ಬಳಿಕವಷ್ಟೇ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಬೇಕು’ ಎಂದು ಹೇಳಿದ್ದಾರೆ.

‘ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಸಾರ್ವಜನಿಕರು, ಮಠಾಧೀಶರು, ಸಮುದಾಯಗಳ ಮುಖಂಡರು, ಸ್ವತಃ ಕಾಂಗ್ರೆಸ್‌ ಪಕ್ಷದ ಅನೇಕ ಸಚಿವರು, ಶಾಸಕರು ವಿರೋಧ ಮಾಡುತ್ತಿದ್ದರೂ, ಅದನ್ನು ಬಲವಾಗಿ ಸಮರ್ಥಿಸಿಕೊಂಡ ಸಿದ್ದರಾಮಯ್ಯ ಸಚಿವ ಸಂಪುಟದ ಮುಂದೆ ತರಲು ಹಠ  ಹಿಡಿದರು. ಈಗ ಹೈಕಮಾಂಡ್‌ ತಪರಾಕಿ ಹಾಕಿದಾಕ್ಷಣ ಮರು ಸಮೀಕ್ಷೆ ಮಾಡಿ ಎಂದು ಹೇಳಿದ ತಕ್ಷಣ ಅದನ್ನು ಒಪ್ಪಿಕೊಂಡಿದ್ದೀರಿ. ಇದರಿಂದ ಸ್ಪಷ್ಟವಾಗುವ ಅಂಶ ಎಂದರೆ, ನಿಮಗೆ ರಾಜ್ಯದ ಜನರ ಮೇಲೆ, ಮಠಾಧೀಶರು, ಸಮುದಾಯಗಳ ಮುಖಂಡರ ಮೇಲೆ ವಿಶ್ವಾಸವಿಲ್ಲ. ಏನೇ ಇದ್ದರೂ ಹೈಕಮಾಂಡ್‌ ವಾಕ್ಯ ಪರಿಪಾಲಕರು’ ಎಂದು ಹೇಳಿದರು.

ದುಃಖ ತಣಿಸುವ ಬದಲು, ಜಾತಿ ಗಣತಿ:

ಇಡೀ ರಾಜ್ಯ ಆಡಳಿತಾತ್ಮಕ ಬಿಕ್ಕಟ್ಟಿನಲ್ಲಿ ಮುಳಗಿರುವಾಗ, ಜನರ ದುಃಖವನ್ನು ತಣಿಸುವ ಬದಲು, ಮತ್ತೊಮ್ಮೆ ಜಾತಿ ಗಣತಿಯ ವಿಷಯವನ್ನು ಮುನ್ನೆಲೆ ತಂದಿದೆ. ದುರಂತದ ಕುರಿತ ನೈಜ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾದ ಕಾಂಗ್ರೆಸ್‌ ಸರ್ಕಾರ ತನ್ನ ಆತ್ಮರಕ್ಷಣೆಗಾಗಿ ಜಾತಿ ಗಣತಿಯ ನಾಟಕ ಆರಂಭಿಸಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕಾಲ್ತುಳಿತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ. ಇಂಥ ದುರಂತದ ಹೊತ್ತಿನಲ್ಲೂ ಸರ್ಕಾರ ಜನತೆಯ ನ್ಯಾಯೋಚಿತ ಆಕ್ರೋಶಕ್ಕೆ ಸ್ಪಂದಿಸಬೇಕಿತ್ತು. ಅದರ ಬದಲು ಹೊಸ ಜಾತಿ ಗಣತಿಯ ಪ್ರಸ್ತಾಪ ಮಾಡಿ ಜನರ ಗಮನ ಬೇರೆಡೆ ಸೆಳೆಯುವ ಹೊಸ ವರಸೆ ಆರಂಭಿಸಿದೆ ಎಂದು ಟೀಕಿಸಿದ್ದಾರೆ.

‘ತಪ್ಪು ದತ್ತಾಂಶ ಆಧರಿಸಿ ಮೀಸಲಾತಿ ವರ್ಗೀಕರಣ’

‘ಕೇಂದ್ರ ಸರ್ಕಾರ ಈಗಾಗಲೇ ಜನಗಣತಿ ಜತೆ ಜಾತಿಗಣತಿ ನಡೆಸುವುದಾಗಿ ಪ್ರಕಟಿಸಿದೆ. ಕೇಂದ್ರವೇ ಜಾತಿಗಣತಿ ನಡೆಸುತ್ತಿರುವಾಗ ರಾಜ್ಯ ಸರ್ಕಾರ ಮತ್ತೊಂದು ಜಾತಿಗಣತಿ ನಡೆಸುವ ಅಗತ್ಯ ಇದೆಯೆ’ ಎಂದು ಶಾಸಕ ವಿ.ಸುನಿಲ್‌ಕುಮಾರ್ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರವು ಕೇಂದ್ರ ನಡೆಸುವ ಜಾತಿ ಗಣತಿ–ಜನಗಣತಿಗೆ ಸಹಕಾರ ನೀಡಬೇಕು. ಕಾಂಗ್ರೆಸ್‌ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಒಬಿಸಿಯವರನ್ನು ಬಳಸಿಕೊಳ್ಳುವುದು ಮತ್ತು ಜನರ ದಿಕ್ಕು ತಪ್ಪಿಸುವುದನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು. ‘ಕಾಂತರಾಜ–ಜಯಪ್ರಕಾಶ್ ಹೆಗ್ಡೆ ವರದಿಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಆದರೆ ದತ್ತಾಂಶದ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್‌ ಅನುಮಾನ ವ್ಯಕ್ತಪಡಿಸಿದೆ. ದತ್ತಾಂಶವೇ ಸರಿ ಇಲ್ಲದಿರುವಾಗ ಅದನ್ನು ಆಧರಿಸಿ ಅವರು ಪ್ರವರ್ಗಗಳನ್ನು ಹೇಗೆ ರಚಿಸಿದರು? ಮೀಸಲಾತಿ ವರ್ಗೀಕರಣಕ್ಕೆ ಅದನ್ನು ಹೇಗೆ ಬಳಸಿಕೊಂಡರು’ ಎಂದು ಸುನಿಲ್‌ಕುಮಾರ್ ಪ್ರಶ್ನಿಸಿದರು.

‘ಜಾತಿ ಗಣತಿ ನಡೆಸಲು 90 ದಿನಗಳ ಗಡುವು ನೀಡಿದ್ದು ಮತ್ತೊಂದು ಸುಳ್ಳು. ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ತಿಂಗಳಲ್ಲಿ ಸಮೀಕ್ಷೆ ಮಾಡುವುದಾಗಿ ಹೇಳಿದ್ದರು. ಈ ಸಮೀಕ್ಷೆಯ ಅವಧಿಯನ್ನು ಮೂರು ಬಾರಿ ಮುಂದೂಡಲಾಗಿದೆ. ಏಳು ಕೋಟಿ ಜನರ ಸಮೀಕ್ಷೆಗೆ ಮೂರು ತಿಂಗಳ ಗಡುವು ನೀಡಿ ಯಾರನ್ನು ವಂಚಿಸಲು ಹೊರಟಿದ್ದೀರಿ? ಗಣತಿ ಮೂರು ತಿಂಗಳಲ್ಲಿ ಮುಗಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.